ಹಾಸನ: 'ನಾನು ಹಾಸನ ಜಿಲ್ಲೆಗೆ ಮಾತ್ರ ಸೀಮಿತ. ನಾನು ಹಾಸನದಲ್ಲೇ ಇರುತ್ತೇನೆ. ನಾನು ಯಾರಿಗೂ ಫೋನ್ ಮಾಡಿಲ್ಲ. ನನ್ನ ಈ ಮುರುಕಲು ಫೋನಿಗೆ ಯಾರು ಫೋನ್ ಮಾಡಲ್ಲ' ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದರು.
ಹಾಸನದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಜೆಡಿಎಸ್, ಅವರು ಬಿಜೆಪಿ, ನಾನು ಯಾಕೆ ಅವರ ಮನೆಗೆ ಊಟಕ್ಕೆ ಹೋಗಲಿ? ನನಗೆ ಯಾರು ಫೋನ್ ಮಾಡಿಲ್ಲ. ನಾನು ಫೋನ್ ಮಾಡೋಣ ಅಂದರೇ ನನ್ನದು ಹಳೆಯ ಬಟನ್ ಫೋನ್. ನನಗೆ ಮಂತ್ರಿ ಸ್ಥಾನ ಬೇಡ, ಡಿಸಿಎಂ ಬೇಡ. ಈಗಾಗಲೇ ಪಿಡಬ್ಲ್ಯೂಡಿ ಮಂತ್ರಿ, ವಸತಿ ಮಂತ್ರಿ ಆಗಿದ್ದೇನೆ. ನನಗೆ ಯಾವ ಆಸೆಯಿಲ್ಲ. ಎಲ್ಲವನ್ನೂ ಅವರೇ ತೆಗೆದುಕೊಳ್ಳಲಿ ನನಗೆ ನಮ್ಮ ರಾಜ್ಯದ ರೈತರ ಹಿತ ಮಾತ್ರ ಮುಖ್ಯ ಎಂದರು.
ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಸಲೇಬೇಕು. ಈ ಬಗ್ಗೆ ಚುನಾವಣೆ ಆಯೋಗ ಪಾರದರ್ಶಕವಾಗಿ ನಡೆದುಕೊಳ್ಳಬೇಕು. ಇಲ್ಲವಾದರೆ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತೆ ಆಗುತ್ತದೆ. 11 ತಿಂಗಳ ಬಿಜೆಪಿ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಸೋಲುವ ಭೀತಿಯಲ್ಲಿ ಬಿಜೆಪಿ ಚುನಾವಣೆಯ ವಿಷಯದಲ್ಲಿ ರಾಜಕೀಯ ಮಾಡಲು ಹೊರಟಿದೆ. ಚುನಾವಣಾ ಆಯೋಗ ಸಹ ಸರ್ಕಾರದ ಜೊತೆ ಶಾಮೀಲಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ರಸ್ತೆಯಲ್ಲಿ ವಾಹನ ಸಂಚಾರ ಮಾಡಲು ಅವಕಾಶ ಕೊಡಲಾಗಿದೆ. ಆದರೆ, ಚುನಾವಣೆ ಬಂದಾಗ ಕೊರೊನಾ ನೆಪವೊಡ್ಡುತ್ತಿದ್ದಾರೆ. ಸರ್ಕಾರದ ರಬ್ಬರ್ ಸ್ಟಾಂಪ್‌ಗಳಾಗಿ ಜಿಲ್ಲಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಚುನಾವಣಾ ಆಯೋಗವು ಜಿಲ್ಲಾಧಿಕಾರಿಗಳಿಂದ ಏತಕ್ಕಾಗಿ ಅಭಿಪ್ರಾಯ ಕೇಳಬೇಕಾಗಿತ್ತೇ? ಆರು ತಿಂಗಳ ಮೊದಲೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕಿತ್ತು, ಆದರೆ ಚುನಾವಣೆ ಆಯೋಗ ಇದರಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.