ಹಾಸನ: ವಿಧಾನ ಪರಿಷತ್ ಉಪ ಸಭಾಪತಿಯನ್ನು ಎಳೆದಾಡಿದ ವಿಚಾರವಾಗಿ ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ನಮ್ಮದೊಂದು ಸಣ್ಣ ಪ್ರಾದೇಶಿಕ ಪಕ್ಷ. ಇವೆಲ್ಲವನ್ನು ಜನತೆಯೇ ನೋಡಿಕೊಳ್ಳುತ್ತಾರೆ. ಅವರಿಗೇ ಬಿಡುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದರು.
ಪ್ರಜ್ವಲ್ ರೇವಣ್ಣನವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ನಡೆದಂತಹ ಘಟನೆ ರಾಜ್ಯವಲ್ಲ ರಾಷ್ಟ್ರವೇ ತಲೆತಗ್ಗಿಸುವಂತಹ ಕೆಲಸವಾಗಿದೆ. ಇಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ. ಜನರೇ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತಾರೆ ಎಂದರು.
ರೈತರ ಸಮಸ್ಯೆಗೆ ಹಸಿರು ಶಾಲು, ಸಾರಿಗೆ ನೌಕರರ ಸಮಸ್ಯೆಗೆ ಖಾಕಿ ಹಾಕಿ
ಸಾರಿಗೆ ನೌಕರರ ಮುಷ್ಕರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಭಾಗಿಯಾಗಿದ್ದು, ಕಾಂಗ್ರೆಸ್ ನಾಯಕರೊಬ್ಬರು ಪ್ರತಿಭಟನೆಯಲ್ಲಿ ಕುಳಿತಿದ್ದರು ಎಂಬ ಕಾರಣಕ್ಕೆ ಇರಬಹುದು. ರೈತರ ಸಮಸ್ಯೆ ಬಂದಾಗ ಹಸಿರು ಶಾಲು, ಕೆಎಸ್ಆರ್ಟಿಸಿ ನೌಕರರ ಪ್ರತಿಭಟನೆ ಬಂದಾಗ ಖಾಕಿ ಬಟ್ಟೆ ಹಾಕಿಕೊಂಡು ಪ್ರತಿಭಟನೆಗೆ ಕೂರಲಿ ಎಂದು ಲೇವಡಿ ಮಾಡಿದರು. ಅಲ್ಲದೆ ಮುಖ್ಯಮಂತ್ರಿಗಳು ನೌಕರರ ಕಾಲು ಹಿಡಿದು ಕೆಲಸಕ್ಕೆ ಬನ್ನಿ ಎಂದು ಕರೆಯುವ ಪರಿಸ್ಥಿತಿಗೆ ಬಂದಿರುವು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.