ಬೇಲೂರು(ಹಾಸನ): ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ಪತಿಯೇ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ನಡೆದಿದೆ. ಇಂದ್ರಮ್ಮ (48) ಕೊಲೆಯಾದ ಮಹಿಳೆ. ಚಂದ್ರಯ್ಯ (58) ಕೊಲೆಗೈದ ಆರೋಪಿ.
ಪ್ರಕರಣದ ವಿವರ:ಆರೋಪಿ ಚಂದ್ರಯ್ಯ ಮದ್ಯಪಾನ ವ್ಯಸನಿಯಾಗಿದ್ದು, ಸಂಸಾರದ ಜವಾಬ್ದಾರಿಯನ್ನು ಪತ್ನಿ ಇಂದ್ರಮ್ಮ ಹೊತ್ತಿದ್ದಳು. ಕುಡಿತದ ದಾಸನಾಗಿದ್ದ ಈತನಿಗೆ ಹೆಂಡತಿ ಹಣ ನೀಡಲಿಲ್ಲ ಎಂದು ಹಲವಾರು ಬಾರಿ ಜಗಳ ಮಾಡಿದ್ದಾನೆ. ಅಲ್ಲದೇ ಆರು ತಿಂಗಳ ಹಿಂದಷ್ಟೇ ಮಲಗಿದ್ದ ಪತ್ನಿಯನ್ನು ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಸೋಮವಾರ ರಾತ್ರಿ ಕಂಠಪೂರ್ತಿ ಕುಡಿದು ಪತ್ನಿಯೊಂದಿಗೆ ಜಗಳ ತೆಗೆದಿದ್ದಾನೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಪ್ರದೀಪ್ ಇಬ್ಬರಿಗೂ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದರಂತೆ. ಬಳಿಕ ನಿನ್ನೆ(ಸೆ.6) ಬೆಳಗ್ಗೆ ಎಂದಿನಂತೆ ಇಂದ್ರಮ್ಮ ತನ್ನ ಜೊತೆಗಾರರೊಂದಿಗೆ ಕೂಲಿ ಕೆಲಸಕ್ಕೆ ಹೋಗುವಾಗ ಮಾರಕಾಸ್ತ್ರ ಹಿಡಿದು ಬಂದ ಚಂದ್ರಯ್ಯ ಏಕಾಏಕಿ ಪತ್ನಿಯ ಮೇಲೆ ಹಲ್ಲೆ ನಡೆಸಿ ಹತ್ಯೆಗೈದು ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಶ್ವಾನದಳ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಇಬ್ಬರ ಬಂಧನ