ಹಾಸನ: ಪತ್ನಿಯ ಶೀಲ ಶಂಕಿಸಿದ ಪತಿವೋರ್ವ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಾಳೇನಹಳ್ಳಿ ಕಾವಲು ಗ್ರಾಮದಲ್ಲಿ ನಡೆದಿದೆ.
ಪತ್ನಿ ಮೇಲಿನ ಶಂಕೆಯಿಂದ ಸಿಸಿಟಿವಿ ತಂದ.. ಕೆಲ ದಿನಗಳಲ್ಲೇ ಮಡದಿ ಕೊಂದ!! ಮಾಲಾ (ಹೆಸರು ಬದಲಿಸಲಾಗಿದೆ) ಕೊಲೆಯಾಗಿರುವ ಮಹಿಳೆ. ಕಳೆದ ರಾತ್ರಿ ಪತ್ನಿಯನ್ನು ಕೊಂದ ಆರೋಪಿ ಪತಿ ಶಂಕರ್ ಪೊಲೀಸರಿಗೆ ಶರಣಾಗಿದ್ದಾನೆ. ಕಡುವಿನ ಹೊಸಹಳ್ಳಿ ಗ್ರಾಮದ ಮಾಲಾಳನ್ನು ಶಂಕರ್ ಜೊತೆ ವಿವಾಹ ಮಾಡಿಕೊಡಲಾಗಿತ್ತು.
ಈ ದಂಪತಿಗೆ ಐದು ವರ್ಷದ ಹೆಣ್ಣು ಮಗು ಸಹ ಇದೆ. ಹೆಂಡತಿ ಯಾರೊಂದಿಗೋ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯ ಮೇಲೆ ಆಗಾಗ್ಗೆ ಜಗಳವಾಡುತ್ತಿದ್ದ ಶಂಕರ್ ಮೊನ್ನೆಯಷ್ಟೇ 35 ಸಾವಿರ ರೂಪಾಯಿಗೆ ಒಡವೆ ಮಾರಿ ಮನೆಗೆ ಸಿಸಿ ಕ್ಯಾಮರಾ ಅಳವಡಿಸಿಕೊಂಡಿದ್ದ. ಆದರೂ ಪತ್ನಿಯ ಮೇಲೆ ಅನುಮಾನಗೊಂಡು ಕೊಲೆ ಮಾಡಿದ್ದಾನೆ.
ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.