ಹಾಸನ: ಮನೆಯ ಬಾಗಿಲನ್ನು ಎರಡು ಭಾಗಗಳಾಗಿ ಮಾಡಿ ಕಳ್ಳತನ ಎಸಗಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು, ಚಿನ್ನಾಭರಣ ದೋಚಿರುವ ಘಟನೆ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ. ಹೊಳೆನರಸೀಪುರ ಪಟ್ಟಣದ ಚಿಟ್ಟನಹಳ್ಳಿ ಬಡಾವಣೆಯ ಪಶುವೈದ್ಯಕೀಯ ಇಲಾಖೆಯ ಅಧಿಕಾರಿಯಾದ ಅಣ್ಣಾಜಿ ಗೌಡರ ಮನೆಯ ಬಾಗಿಲನ್ನು ಕಳ್ಳರು ಜಖಂಗೊಳಿಸಿದ್ದಾರೆ. ನಂತರ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಏನಿದು ಘಟನೆ:ಕಳೆದ ಒಂದು ವಾರದಿಂದ ನಿರಂತರವಾಗಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಇದೀಗ 24 ಗಂಟೆಗಳಲ್ಲಿ ಎಂಟು ವಾಣಿಜ್ಯ ಮಳಿಗೆ ಸೇರಿದಂತೆ ಒಂದು ವಾಸದ ಮನೆಯಲ್ಲೂ ಕಳ್ಳತನ ಪ್ರಕರಣ ನಡೆದಿದ್ದು, ಹೊಳೆನರಸೀಪುರದ ಜನತೆ ಬೆಚ್ಚಿಬಿದ್ದಿದ್ದಾರೆ.
ಆಗಸ್ಟ್ 20 ರ ಶನಿವಾರ ರಾತ್ರಿ ಹೊಳೆನರಸೀಪುರದ ಗಾಂಧಿ ವೃತ್ತದಲ್ಲಿ ಇರುವಂತಹ ಬಟ್ಟೆ ಅಂಗಡಿಗೆ ಕನ್ನ ಹಾಕಿ ಬ್ರಾಂಡೆಡ್ ಬಟ್ಟೆಗಳನ್ನು ಖದೀಮರು ಕದ್ದೊಯ್ದಿದ್ದಾರೆ. ಹೊಳೆನರಸೀಪುರದ ಪುರಸಭೆ ಎದುರಿಗಿರುವ ಏಳು ಅಂಗಡಿಗಳಲ್ಲಿ ಕಳ್ಳತನ ಮಾಡಿ ಸುಮಾರು ಐದಾರು ಲಕ್ಷ ಮೌಲ್ಯದ ಬಟ್ಟೆ ಮತ್ತು ದಿನಸಿ ಪದಾರ್ಥಗಳನ್ನು ಕಳ್ಳತನ ಮಾಡಿದ್ದಾರೆ.
ಪರಿಚಯಸ್ಥರಿಂದಲೇ ಕಳ್ಳತನವಾಗಿರುವ ಶಂಕೆ: ಪಶು ವೈದ್ಯಕೀಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಣ್ಣಾಜಿ ಗೌಡ ಎಂಬುವವರು ಮನೆಗೆ ಬೀಗ ಹಾಕಿಕೊಂಡು ಕರ್ತವ್ಯಕ್ಕೆ ತೆರಳಿದ್ದರು. ಇವರ ಚಲನವಲನಗಳನ್ನು ಗಮನಿಸಿರುವ ಖತರ್ನಾಕ್ ಕಳ್ಳರು ಮನೆಯ ಬೀಗವನ್ನು ತೆಗೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮನೆಯ ಬಾಗಿಲನ್ನೇ ಎರಡು ತುಂಡಾಗಿ ಮಾಡಿದ್ದಾರೆ. ನಂತರ ಮನೆಯೊಳಗೆ ಪ್ರವೇಶ ಮಾಡಿ ಅದರಲ್ಲಿದ್ದ ಬೆಲೆಬಾಳುವ ಚಿನ್ನಾಭರಣಗಳು, ವಸ್ತುಗಳು ಮತ್ತು ನಗದನ್ನು ಕದ್ದಿದ್ದಾರೆ.