ಹಾಸನ:ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮನೆಯಿಂದ ಹೊರ ಬರಲು ಆಗದ ಪರಿಸ್ಥಿತಿ ತಂದೊಡ್ಡಿದೆ. ವಿಪರೀತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆಯಲ್ಲದೇ ಹಲವು ಮನೆಗಳು ಕುಸಿದು ಬಿದ್ದು, ಅಪಾರ ನಷ್ಟ ಸಂಭವಿಸಿದೆ.
ಭಾರೀ ಮಳೆಗೆ ಮನೆಗಳು ಕುಸಿತ.. ಮಹಾಮಳೆಗೆ ಮುಳುಗಿದ ಬದುಕು.. - kannadanews
ರಾಜ್ಯದೆಲ್ಲೆಡೆ ತನ್ನ ರೌದ್ರಾವತಾರ ತೋರುತ್ತಿರುವ ಮಳೆ ಹಾಸನದಲ್ಲಿ ಕೂಡ ತನ್ನ ಆರ್ಭಟ ಮುಂದುವರೆಸಿದೆ.
![ಭಾರೀ ಮಳೆಗೆ ಮನೆಗಳು ಕುಸಿತ.. ಮಹಾಮಳೆಗೆ ಮುಳುಗಿದ ಬದುಕು..](https://etvbharatimages.akamaized.net/etvbharat/prod-images/768-512-4084046-thumbnail-3x2-surya.jpg)
ಮಳೆಯ ಆರ್ಭಟಕ್ಕೆ ನಗರದ ಚಿತಿನ್ ಕಟ್ಟೆ ಸುತ್ತಮುತ್ತ ಮೂರು ಮನೆ ಹಾಗೂ ಮಳಿಗೆಗಳು ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಮನೆಯ ಗೋಡೆಗಳು ನೆಲಕಚ್ಚಿವೆ, ಮುಂದೆ ಮತ್ತಷ್ಟು ಕುಸಿಯುವ ಮುನ್ಸೂಚನೆಯನ್ನು ನೀಡುತ್ತಿವೆ. ವಿಷಯ ತಿಳಿದ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಮನೆ ಮನೆಗೂ ತೆರಳಿ ಪರಿಶೀಲನೆ ನಡೆಸಿ ಅಂಕಿಅಂಶ ಕಲೆಹಾಕುತ್ತಿದ್ದಾರೆ.
ಇಲ್ಲಿನ ನಿವಾಸಿಗಳು ಮಳೆಗಾಲದಲ್ಲಿ ಇದ್ದ ಒಂದು ಸೂರನ್ನು ಕಳೆದುಕೊಂಡು ಬೀದಿಯಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದು, ಮುಂದೇನು ಮಾಡಬೇಕೆಂದು ತೋಚದೆ ಚಿಂತೆಗೀಡಾಗಿದ್ದಾರೆ. ಸದ್ಯ ಮನೆ ಕಳೆದುಕೊಂಡವರಿಗೆ ಪಕ್ಕದ ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆದು ಉಳಿದುಕೊಳ್ಳಲು ತಾತ್ಕಾಲಿಕ ಸೂರು ಕಲ್ಪಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಕಷ್ಟಕ್ಕೆ ಸ್ಪಂದಿಸಿ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಸಂತ್ರಸ್ತರು ಮನವಿ ಮಾಡಿಕೊಂಡಿದ್ದಾರೆ.