ಸಕಲೇಶಪುರ: ಆರೋಗ್ಯ ಇಲಾಖೆಯಲ್ಲಿ ತಾತ್ಕಾಲಿಕವಾಗಿ ಹೊರ ಗುತ್ತಿಗೆ ಮೂಲಕ ನೇಮಕಗೊಂಡಿರುವ ಡಿ ಗ್ರೂಪ್ ನೌಕರರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಶಾಸಕ ಹೆಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದರು.
ಶಾಸಕ ಹೆಚ್.ಕೆ.ಕುಮಾರಸ್ವಾಮಿ ಮನವಿ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಖಾಸಗಿ ಏಜೆನ್ಸಿಗಳ ಮುಖಾಂತರ ಆಯ್ಕೆ ಮಾಡಿರುವ ಡಿ ಗ್ರೂಪ್ ಸಿಬ್ಬಂದಿಗಳಿಗೆ ಕಳೆದ ಮೂರು, ನಾಲ್ಕು ತಿಂಗಳಿಂದ ಸಂಬಳ ನೀಡಿಲ್ಲ. ಇದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದರು.
ಇದರಿಂದಲೇ ಬದುಕು ಸಾಗಿಸುವವರನ್ನು ಸರ್ಕಾರ ಕೂಡಲೇ ಗುರುತಿಸಿ ಆದ್ಯತೆ ಮೇರೆಗೆ ಸಂಬಳ ನೀಡಬೇಕು. ಸರ್ಕಾರ ಈಗಾಗಲೇ ಸಾರಿಗೆ ಇಲಾಖೆ ಸೇರಿದಂತೆ ಹಲವಾರು ಸಂಸ್ಥೆಯಲ್ಲಿ ನೌಕರಿ ಮಾಡುತ್ತಿರುವವರಿಗೆ ಸಂಬಳ ನೀಡಿದೆ. ಆರೋಗ್ಯ ಇಲಾಖೆಯ ತಾತ್ಕಾಲಿಕ ಡಿ ಗ್ರೂಪ್ ನೌಕರರಿಗೆ ಆದ್ಯತೆ ನೀಡಿ, ಏಜನ್ಸಿಯವರಿಗೆ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಇದರಿಂದ ಸಂಕಷ್ಟದಲ್ಲಿರುವ ಡಿ ಗ್ರೂಪ್ ನೌಕರರಿಗೆ ಅನುಕೂಲವಾಗುತ್ತದೆ. ಈ ನೌಕರರು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದನ್ನು ನಿಲ್ಲಿಸಿದರೆ, ಆಸ್ಪತ್ರೆಯ ದೈನಂದಿನ ವ್ಯವಸ್ಥೆ ಹದಗೆಡುತ್ತದೆ. ಇದನ್ನು ಮನಗಂಡು ಆರೋಗ್ಯ ಸಚಿವರು ಹಾಗೂ ಕರ್ನಾಟಕ ಸರ್ಕಾರ ಕೂಡಲೇ ಬೇಡಿಕೆ ಈಡೇರಿಸಲು ಮುಂದಾಗಬೇಕು ಎಂದರು.