ಅರಕಲಗೂಡು:ದೇಶದ ಗಡಿ ಕಾಯುವ ಸೈನಿಕರಷ್ಟೇ ಶ್ರಮವಹಿಸಿ ಮಹಾಮಾರಿ ಕೊರೊನಾ ಸೋಂಕು ತಡೆಗೆ ಪ್ರಾಣ ಒತ್ತೆ ಇಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್ ಗಳ ಸೇವೆಗೆ ಬೆಲೆ ಕಟ್ಟಲು ಸಾಧ್ಯವಾಗದು ಎಂದು ಮಾಜಿ ಸಚಿವ ಎ. ಮಂಜು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಕೊಣನೂರು ವೈಎಸ್ ಆರ್ ಕಲ್ಯಾಣ ಮಂಟಪದಲ್ಲಿ ಎ.ಮಂಜು ಅಭಿಮಾನಿ ಬಳಗದ ವತಿಯಿಂದ ಇಂದು ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಎ.ಮಂಜು, ಜಗತ್ತಿನ ಎಲ್ಲೆಡೆ ಮಹಾಮಾರಿಯಾಗಿ ವ್ಯಾಪಿಸುತ್ತಿರುವ ಕೊರೊನಾ ಸೋಂಕು ಇಡೀ ಮನುಕುಲಕ್ಕೆ ಕಂಟಕವಾಗುತ್ತಿದೆ. ಈ ನಡುವೆ ಜೀವದ ಹಂಗು ತೊರೆದು ಜನರಿಗೆ ತಿಳುವಳಿಕೆ ನೀಡಿ ಸೋಂಕು ಹರಡದಂತೆ ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ ಗಳ ಸೇವೆ ಅನನ್ಯವಾದದ್ದು ಎಂದು ಶ್ಲಾಘಿಸಿದರು.