ಹಾಸನ: ತಾಲೂಕಿನ ದುದ್ದ ಗ್ರಾಮದಲ್ಲಿ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ವೀರಗಲ್ಲುಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಇದೇ ವೇಳೆ 1981 ಏಪ್ರಿಲ್ 11 ರಂದು ನಡೆದ ಗೋಲಿಬಾರ್‌ನಲ್ಲಿ ಮೃತಪಟ್ಟ ಮೂವರು ರೈತರಾದ ದುದ್ದ ಜವರೇಗೌಡ, ಜೋಡಿ ಕೃಷ್ಣಾಪುರದ ನಟರಾಜು, ಹಿರೆಕಡಲೂರಿನ ಅಡಾವುಡಿ ಅವರನ್ನು ಸ್ಮರಿಸಲಾಯಿತು. ದುದ್ದ ವೃತ್ತದಲ್ಲಿ ನಿರ್ಮಿಸಿರುವ ವೀರಗಲ್ಲಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಉಪಾಧ್ಯಕ್ಷ ಡಿ.ಕೆ. ನಿಂಗೇಗೌಡ ಪೂಜೆ ಸಲ್ಲಿಸುವ ಮೂಲಕ ಗೌರವ ಸೂಚಿಸಿದರು. ನಂತರ ರೈತ ಸಂಘದ ಶಾಲು ಧರಿಸಿದ್ದ ನೂರಕ್ಕೂ ಅಧಿಕ ಜನರು ರೈತಪರ ಘೋಷಣೆ ಕೂಗಿ ಬೃಹತ್ ಮೆರವಣಿಗೆ ನಡೆಸಿದ್ರು.
ರೈತರಿಂದ ವೀರಗಲ್ಲುಗಳಿಗೆ ಗೌರವ ಸಮರ್ಪಣೆ ಘಟನೆ ಹಿನ್ನೆಲೆ:
1980ರಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ರೈತ ಸಂಘ ಉಗ್ರ ಹೋರಾಟ ಕೈಗೊಂಡಿತ್ತು. ಉತ್ತರ ಕರ್ನಾಟಕದ ನರಗುಂದದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದು ಗೋಲಿಬಾರ್‌ಗೆ ಹತ್ತಾರು ಜನರು ಮೃತಪಟ್ಟರು. ಅದೇ ರೀತಿ ರಾಜ್ಯದ ವಿವಿಧೆಡೆ ಪ್ರತಿಭಟನೆಗಳ ಸರಣಿ ಆರಂಭವಾಯಿತು.1981ರ ಏಪ್ರಿಲ್ 11 ರಂದು ಸಾಲಮನ್ನಾ, ಬೆಳೆಗೆ ಬೆಂಬಲ ಬೆಲೆ ನಿಗದಿ ಸೇರಿದಂತೆ ವಿವಿಧ 19 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದುದ್ದದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ದುದ್ದದ ಬಸ್ ನಿಲ್ದಾಣ ಸಮೀಪದ ರಸ್ತೆಯಲ್ಲಿ ಏರ್ಪಡಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ದುದ್ದ, ಚನ್ನರಾಯಪಟ್ಟಣ, ಅರಸೀಕೆರೆ, ಹಾಸನ ಸೇರಿದಂತೆ ವಿವಿಧ ಭಾಗದ ರೈತರು ಪಾಲ್ಗೊಂಡಿದ್ದರು. ಈ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಆದರೂ ರೈತರು ಪ್ರತಿಭಟನೆಯಿಂದ ಹಿಂದೆ ಸರಿಯದ ಕಾರಣ, ನಡೆಸಿದ ಗೋಲಿಬಾರ್‌ನಲ್ಲಿ ಮೂವರು ರೈತರು ಮೃತಪಟ್ಟರೆ, ಇನ್ನೂರಕ್ಕೂ ಅಧಿಕ ರೈತರನ್ನು ಬಂಧಿಸಲಾಗಿತ್ತು ಎಂದು ಹಳೆಯ ಕಹಿ ನೆನಪುಗಳನ್ನು ಸ್ಮರಿಸಿಕೊಂಡರು.
ರೈತ ಸಂಘ ಬಲಗೊಳ್ಳಲಿ:
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುವ ಹೋರಾಟ ಫಲಪ್ರದವಾಗಬೇಕೆಂದರೆ ಒಗ್ಗಟ್ಟು ಮುಖ್ಯ. ರೈತ ಸಂಘ ಮೊದಲಿನ ಹಾಗೆ ಗಟ್ಟಿಯಾಗಿಲ್ಲ. ದೇಶಕ್ಕೆ ಅನ್ನ ನೀಡುವ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಯಾವ ಸರ್ಕಾರಗಳು ಪ್ರಯತ್ನಿಸುತ್ತಿಲ್ಲ. ಚುನಾವಣೆ ವೇಳೆ ಆಸೆ ಆಮಿಷ ಒಡ್ಡುವ ಜನಪ್ರತಿನಿಧಿಗಳು ಆ ಬಳಿಕ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದರು.