ಹಾಸನ: ಮಾಧ್ಯಮಗಳು ಮತ್ತು ಕುಟುಂಬಸ್ಥರ ಸಹಕಾರದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಸರ್ಕಾರ, ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆಯನ್ನು ಯಶಸ್ವಿಯಾಗಿ ಮಾಡಿದೆ ಎಂದು ರಾಜ್ಯ ಗೃಹಮಂತ್ರಿ ಆರಗ ಜ್ಞಾನೇಂದ್ರ ಹೇಳಿದರು.
ಹಾಸನ ನಗರದ ಅಧಿದೇವತೆ ಹಾಸನಾಂಬೆಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವರ ನಟ ಡಾ. ರಾಜ್ಕುಮಾರ್ ನಿಧನರಾದ ಸಂದರ್ಭದಲ್ಲಿ ಈಗಿರುವಷ್ಟು ಮಾಧ್ಯಮಗಳು ಬಳಕೆಯಲ್ಲಿರಲಿಲ್ಲ. ಆದರೆ ಇವತ್ತಿನ ಮಾಧ್ಯಮಗಳ ಪ್ರಚಾರದ ಅಬ್ಬರದಲ್ಲಿ ಅಭಿಮಾನಿಗಳನ್ನು ನಿಯಂತ್ರಿಸಲು ಕಷ್ಟವಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಮಾಧ್ಯಮಗಳು ಮತ್ತು ಅವರ ಕುಟುಂಬಸ್ಥರು ಪೊಲೀಸ್ ಇಲಾಖೆಗೆ ಸಾಕಷ್ಟು ಸಹಕಾರ ನೀಡಿದ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪುನೀತ್ ಅಂತ್ಯಕ್ರಿಯೆ ನಡೆಸಲಾಯಿತು. ಈ ಹಿನ್ನೆಲೆ ಎಲ್ಲರಿಗೂ ನಾನು ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ ವಿದೇಶದಲ್ಲಿದ್ದ ಮಗಳು ಬರುವಿಕೆಯ ಹಿನ್ನೆಲೆಯಲ್ಲಿ ಒಂದು ದಿನ ತಡವಾಗಿ ಅಂತ್ಯಕ್ರಿಯೆ ನೆರವೇರಿದೆ. ಆದರೆ ಅಭಿಮಾನಿಗಳ ನೋವನ್ನು, ಅವರ ದುಃಖ-ದುಮ್ಮಾನಗಳನ್ನು ಮಾಧ್ಯಮಗಳಲ್ಲಿ ತೋರಿಸಲಾಗಿದ್ದು, ಪುನೀತ್ ರಾಜ್ಕುಮಾರ್ ಸಂಪಾದಿಸಿದ ಆಸ್ತಿ ಏನೆಂಬುದು ಈಗ ರಾಜ್ಯಕ್ಕಷ್ಟೇ ಅಲ್ಲದೆ, ರಾಷ್ಟ್ರಕ್ಕೆ ಗೊತ್ತಾಗಿದೆ ಎಂದರು.
ಬಿಜೆಪಿ ಸರ್ಕಾರ ಬಂದ ನಂತರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತುಂಬಾ ಚೆನ್ನಾಗಿದೆ. ಮತ್ತಷ್ಟು ಕಾನೂನು ಮತ್ತು ಸುವ್ಯವಸ್ಥೆ ಚೆನ್ನಾಗಿರಲಿ ಎಂದು ಹಾಸನಾಂಬೆ ತಾಯಿ ಬಳಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ಸಂದರ್ಭದಲ್ಲಿ ಸರ್ಕಾರ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದೆ ಎಂದು ಪ್ರತಿಪಕ್ಷದವರೂ ಕೂಡ ನಮ್ಮನ್ನು ಹೊಗಳಿದ್ದಾರೆ. ಇದು ನಮ್ಮ ಪೊಲೀಸ್ ಇಲಾಖೆಗೆ ಸಂದ ಗೌರವ ಎಂದು ಸಚಿವರು ಹೇಳಿದರು.