ಹಾಸನ :ಮತಾಂತರದಿಂದ ರಾಜ್ಯಾದ್ಯಂತ ಕೋಮು ಗಲಭೆ ನಡೆಯುತ್ತಿದೆ. ಮತಾಂತರಕ್ಕೆ ಶಾಸಕರ ಕುಟುಂಬ ಒಳಗಾಗಿರುವುದು ವಿಪರ್ಯಾಸ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಕಾಫಿ ದಿನದ ಅಂಗವಾಗಿ ಹಾಸನ ಜಿಲ್ಲೆಯ ಹಳೇಬೀಡಿನ ಪುಷ್ಪಗಿರಿ ಮಠದ ಆವರಣದಲ್ಲಿ ನಡೆದ ಕಾಫಿ ಬೆಳೆಗಾರರ ಸಮಾವೇಶ ಉದ್ಘಾಟಿಸಿ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಮತಾಂತರ ಮಾಡಿ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುವುದು ಅಧರ್ಮ. ಹಿಂದೂ ಧರ್ಮ ಜಗತ್ತಿನಲ್ಲೇ ಪಾವಿತ್ರ್ಯತೆ ಹೊಂದಿರುವಂತಹದ್ದಾಗಿದೆ. ಇದರಿಂದ ತಾಯಿ ಮಗನೇ ಬೇರಾಗುವಂತೆ ಆಗಿದೆ. ಮತಾಂತರ ನಿಷೇಧಿಸಲು ಕಾನೂನು ರಚಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತಾಂತರ ನಿಷೇಧಕ್ಕೆ ಸೂಕ್ತ ಕಾನೂನು ತರುತ್ತೇವೆ ಎಂದರು.
ಮತಾಂತರ ಕುರಿತಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿರುವುದು.. ಆರ್ಎಸ್ಎಸ್ ಅನ್ನು ಭಯೋತ್ಪಾದಕರಿಗೆ ಹೋಲಿಕೆ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ಯಾವುದೇ ಅಪರಾಧವಾದರೂ ಸರಿಯಾದ ತನಿಖೆಯನ್ನು ಸರ್ಕಾರ ನಡೆಸುತ್ತದೆ.
ಸಿದ್ದರಾಮಯ್ಯ ಅವರಿಗೆ ತಾಲಿಬಾನ್ ಮತ್ತು ಆರ್ಎಸ್ಎಸ್ಗೆ ವ್ಯತ್ಯಾಸ ತಿಳಿದಿಲ್ಲ ಅನಿಸುತ್ತದೆ. ರಾಜಕೀಯ ಕಾರಣಕ್ಕಾಗಿ ಆರ್ಎಸ್ಎಸ್ ಅನ್ನು ಮಧ್ಯಕ್ಕೆ ಎಳೆಯುತ್ತಿದ್ದಾರೆ. ಅವರಿಗೆ ಬೇರೆ ಅಸ್ತ್ರವಿಲ್ಲದೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
ದೇಶ ಮತ್ತು ವ್ಯಕ್ತಿ ಎಂದು ಬಂದಾಗ ಮೊದಲು ದೇಶದ ಪರ ನಿಲ್ಲಬೇಕು ಎಂದು ಆರ್ಎಸ್ಎಸ್ ಹೇಳುತ್ತದೆ. ಈ ರೀತಿ ಹೇಳುವ ಸಂಘಟನೆ ಯಾವುದಾದರೂ ಇದ್ದರೆ ಅದು ಆರ್ಎಸ್ಎಸ್ ಮಾತ್ರ ಎಂದ ಅವರು, ಕಾಫಿ ವಹಿವಾಟಿಗೆ ಸಿದ್ದಾರ್ಥ್ ತುಂಬಾ ಶ್ರಮಪಟ್ಟಿದ್ದಾರೆ. ಕಾಫಿ ಬೆಳೆಗಾರರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ನಿಲ್ಲುತ್ತದೆ ಎಂದು ಭರವಸೆ ನೀಡಿದರು.
ಓದಿ:ಅಕ್ಟೋಬರ್ 7ರಿಂದ 13ರವರೆಗೆ ಅರಮನೆ ಮುಂಭಾಗ ಭರ್ಜರಿ ಸಾಂಸ್ಕೃತಿಕ ಕಾರ್ಯಕ್ರಮ : ಪಟ್ಟಿ ಇಲ್ಲಿದೆ