ಹಾಸನ:ದೇವೇಗೌಡರ ಕುಟುಂಬಕ್ಕೆ ರಾಜಕಾರಣ 'ಲಾಭದಾಯಕ ಉದ್ದಿಮೆ'ಯಾಗಿದೆ. ಹಾಗಾಗಿ ಅವರೆಲ್ಲಾ ಸೂಕ್ತ ಸ್ಥಾನಮಾನ ಪಡೆಯಲು ಹವಣಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್ ಹೇಳಿದರು.
ದೇವೇಗೌಡರ ಕುಟುಂಬಕ್ಕೆ ರಾಜಕಾರಣ 'ಲಾಭದಾಯಕ ಉದ್ದಿಮೆ': ವಿಶ್ವನಾಥ್ ವ್ಯಂಗ್ಯ - undefined
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕುಟುಂಬಕ್ಕೆ ರಾಜಕಾರಣ 'ಲಾಭದಾಯಕ ಉದ್ದಿಮೆ' ಆಗಿದೆ ಎಂದು ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್ ವ್ಯಂಗ್ಯವಾಡಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ಬಲ್ ಅವರಿಗೆ, ಸಚಿವ ರೇವಣ್ಣ 1.26 ಕೋಟಿ ರೂ, ಭವಾನಿ ರೇವಣ್ಣ 43 ಲಕ್ಷ ರೂ, ಅನುಸೂಯ ಮಂಜುನಾಥ್ 22 ಲಕ್ಷ ರೂ, ಸಿ.ಎನ್.ಪಾಂಡು 15 ಲಕ್ಷ ರೂ.ಗಳನ್ನು ಸಾಲವಾಗಿ ಕೊಟ್ಟಿರುವ ಬಗ್ಗೆ ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಸಣ್ಣ ರೈತರು ಸಾಲಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಜೊತೆಗೆ, ದೊಡ್ಡ ದೊಡ್ಡ ಕಾಫಿ ಬೆಳೆಗಾರರೂ ಮೈ ತುಂಬ ಸಾಲ ಮಾಡಿಕೊಂಡು ಪರದಾಟ ಅನುಭವಿಸುತ್ತಿದ್ದಾರೆ. ಹೀಗಿರುವಾಗ ದೇವೇಗೌಡರ ಸಂಬಂಧಿಕರು ಇಷ್ಟೊಂದು ಹಣವನ್ನು ಪ್ರಜ್ವಲ್‌ಗೆ ಕೊಡಲು ಶಕ್ತರಾಗಿದ್ದಾರೆಯೇ? ಎಂದು ಪ್ರಶ್ನಿಸಿದರು.
ಇನ್ನೂ ಮುಂದುವರೆದು ಮಾತನಾಡಿದ ಶಾಸಕ, ಹಾಸನಕ್ಕೆ ನಮ್ಮ ಕುಟುಂಬ ಮಾಡಿರುವಷ್ಟು ಅಭಿವೃದ್ಧಿಯನ್ನು ಯಾರೂ ಮಾಡಿಲ್ಲ ಎಂದು ದೇವೇಗೌಡರು ಹೇಳುತ್ತಿದ್ದಾರೆ. ಆದರೆ, ಜನತೆ ಇವರ ಕುಟುಂಬಕ್ಕೆ ನೀಡಿರುವಷ್ಟು ರಾಜಕೀಯ ಸ್ಥಾನಮಾನಗಳನ್ನು ಯಾವ ಕುಟುಂಬಕ್ಕೂ ನೀಡಿಲ್ಲ. ದೇವೇಗೌಡರು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ, ಪ್ರಧಾನಿ ಹುದ್ದೆವರೆಗೂ ಏರಿದ್ದಾರೆ. ಹೀಗಿದ್ದರೂ ಕುಟುಂಬವನ್ನು ರಾಜಕೀಯದಲ್ಲಿ ಬೆಳೆಸುವ ಆಸೆ ಅವರಿಗೆ ಇನ್ನೂ ಕಡಿಮೆ ಆಗಿಲ್ಲ ಎಂದು ಚುಚ್ಚಿದರು.