ಹಾಸನ: ದಲಿತರ ವಿಚಾರಗಳನ್ನು ಮುಂದಿಟ್ಟುಕೊಂಡು ಇದೀಗ ಜೆಡಿಎಸ್ ಮತಬೇಟೆಗೆ ಮುಂದಾಗಿದೆ. ಆದರೆ ದಲಿತರಿಗೆ ಜೆಡಿಎಸ್ ಏನು ನೀಡಿದೆ ಎಂದುಮಾಜಿ ಸಚಿವ ಹೆಚ್.ಎಂ.ವಿಶ್ವನಾಥ್ ಪ್ರಶ್ನಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸನಸಭೆಗೆ ಆರು ಬಾರಿ ಆಯ್ಕೆಯಾಗಿದ್ದರೂ ಹೆಚ್.ಕೆ.ಕುಮಾರಸ್ವಾಮಿಯವರಿಗೆ ಮಂತ್ರಿ ಸ್ಥಾನವನ್ನು ಕೊಟ್ಟಿಲ್ಲ ಎಂದು ಹೇಳಿದರು.
ಅಷ್ಟೇ ಅಲ್ಲದೆ, ಧಾರ್ಮಿಕ ಹಿನ್ನೆಲೆಯಿಂದ ದೇಶದಲ್ಲಿ ಮೌಢ್ಯತೆ ಹೆಚ್ಚುತ್ತಿದೆ. ಮಾಟ-ಮಂತ್ರಕ್ಕೆ ಕೆಲವರು ಹೆದರುತ್ತಿದ್ದಾರೆ. ಕಾಂಗ್ರೆಸ್ನ ದೊಡ್ಡ ದೊಡ್ಡ ಮುಖಂಡರು ಕೈ ಕಟ್ಟಿ ಕುಳಿತಿದ್ದಾರೆ. ಆದರೆ ಯಾರು ಕೂಡ ಜೆಡಿಎಸ್ನ ಗೊಡ್ಡು ಬೆದರಿಕೆಗೆ ಹೆದರುವ ಅಗತ್ಯವಿಲ್ಲ. ಚುನಾವಣಾ ಆಯೋಗಕ್ಕೆ ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರ ಕ್ಷೇತ್ರಗಳಲ್ಲಿ ಬಂದೋಬಸ್ತ್ ನೀಡುವಂತೆ ಕೇಳುತ್ತೇವೆ ಎಂದರು.
ಇನ್ನು, 2003ರಲ್ಲಿ ಶ್ರೀಕೃಷ್ಣ ದೇವಾಲಯ ಉದ್ಘಾಟನೆ ವೇಳೆ ದಲಿತರು ಆಗಮಿಸಿದ್ದರು. ಈ ಸಂದರ್ಭದಲ್ಲಿ ದೇವೇಗೌಡ್ರು ದೊಡ್ಡ ಕಣ್ಣಿನಿಂದ ನೋಡಿದ್ದರು ಎಂದರು. ಜೆಡಿಎಸ್ಗೆ ದಲಿತರು ಮತ್ತು ಮುಸ್ಲಿಂ ಸಮುದಾಯದ ಮತಗಳನ್ನು ಕೇಳುವ ನೈತಿಕ ಹಕ್ಕು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಗೆಲುವು ನಿಶ್ಚಿತ. ದಲಿತರು ಮಾತ್ರವಲ್ಲ ಒಕ್ಕಲಿಗರಲ್ಲೂ ಕ್ರಾಂತಿ ಆಗಲಿದೆ. ಸೂಟ್ಕೇಸ್ ಹಿಡಿದುಕೊಂಡು ಮುಖಂಡರನ್ನ ಭೇಟಿ ಮಾಡುತ್ತಿದ್ದಾರೆ. ನಿಮಗೆ ತಾಕತ್ತಿದ್ದರೆ ಒಕ್ಕಲಿಗ ಸಮುದಾಯದ ಸುಪ್ರದೀಪ್ ಯಜಮಾನ ಹಾಗೂ ಆಲೂರಿನ ಮಂಜುನಾಥ್ ಅವರನ್ನ ಈಗಲೇ ವಿಧಾನ ಪರಿಷತ್ ಸದಸ್ಯರೆಂದು ಘೋಷಿಸಿ ಎಂದು ಸವಾಲು ಹಾಕಿದರು.