ಹಾಸನ: ರಾಜಕಾರಣಿಗಳ ಇಂತಹ ಪ್ರಕರಣಗಳು ರಾಜಕೀಯ ವಲಯದಲ್ಲಿ ತಲೆತಗ್ಗಿಸುವಂತೆ ಮಾಡುತ್ತದೆ. ಹೀಗಾಗಿ ಅವರು ಭಾಗಿ ಆಗಿರಲಿ, ಇಲ್ಲದಿರಲಿ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು, ನೀಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಹೇಳಿದ್ದಾರೆ.
ಬಜೆಟ್ ಅಧಿವೇಶನದಲ್ಲೂ ಸಿಡಿ ವಿಚಾರ ಪ್ರಸ್ತಾಪಿಸುವೆ: ಹೆಚ್.ಕೆ.ಕುಮಾರಸ್ವಾಮಿ - Budget session 2021
ಇಂದಿನಿಂದ ಸದನ ಆರಂಭವಾಗಲಿದ್ದು, ಅಲ್ಲಿಯೂ ಕೂಡಾ ಸಚಿವ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಬಹಿರಂಗ ವಿಚಾರವಾಗಿ ಪ್ರಸ್ತಾಪಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನದಲ್ಲಿ ಸಚಿವ ಜಾರಕಿಹೊಳಿಯವರದ್ದು ಎನ್ನಲಾದ ಸಿಡಿ ಬಹಿರಂಗ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತನಿಖೆ ನಂತರ ಈ ವಿಡಿಯೋದ ನೈಜತೆ ತಿಳಿಯುತ್ತದೆ. ತಪ್ಪಿಲ್ಲದಿದ್ದರೆ ಜಾರಕಿಹೊಳಿ ಮಂತ್ರಿಯಾಗಿ ಮುಂದುವರಿಯಲಿ. ಹಿಂದೆಯೂ ಕೂಡ ಇಂತಹ ಘಟನೆಗಳು ಇವರ ಪಕ್ಷದಲ್ಲಿ ನಡೆದಿದ್ದು, ಆಗಲೂ ರಾಜೀನಾಮೆ ನೀಡಿದ್ದಾರೆ ಎಂದರು.
ಬಿಜೆಪಿ ಪಕ್ಷ ಒಂದು ಶಿಸ್ತಿನ ಪಕ್ಷವಾಗಿದೆ. ಆದರೆ ಪದೇ ಪದೇ ಇಂತಹ ಪ್ರಕರಣಗಳು ಪಕ್ಷದಲ್ಲಿ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ರಾಜಕಾರಣಿಗಳು ಸಾರ್ವಜನಿಕ ಜೀವನದಲ್ಲಿ ಶಿಸ್ತಿನಿಂದ ಇರಬೇಕು. ಇದು ಅಕ್ಷಮ್ಯ ಅಪರಾಧವಾಗಿದೆ. ಬಿಜೆಪಿ ಪಕ್ಷದ ಕೆಲ ಮುಖಂಡರು ಸಿಡಿ ಬಗ್ಗೆ ಮೊದಲೇ ಸುಳಿವು ನೀಡಿದ್ದು, ಇಂತಹದ್ದೇ ವಿಚಾರದ ಸಿಡಿ ಎಂದು ಈಗ ತಿಳಿಯುತ್ತಿದೆ. ಇಂತಹ ವಿಡಿಯೋಗಳಿಂದ ಸಾರ್ವಜನಿಕರಿಗೆ ಹೇಸಿಗೆ ಬಂದಿದೆ. ಇಂತಹ ಘಟನೆಗಳನ್ನು ನಮ್ಮ ಪಕ್ಷದ ವತಿಯಿಂದ ಖಂಡಿಸುತ್ತೇವೆ. ಇಂದಿನಿಂದ ಸದನ ಆರಂಭವಾಗಲಿದ್ದು, ಅಲ್ಲಿಯೂ ಕೂಡ ಸಿಡಿ ವಿವಾದವನ್ನು ಪ್ರಸ್ತಾಪಿಸುತ್ತೇವೆ ಎಂದು ಹೇಳಿದರು.