ಬೆಂಗಳೂರು : ಹಾಸನ ಜಿಲ್ಲೆಯ ಹಿರಿಸಾವೆ-ಶ್ರವಣಬೆಳಗೊಳ ಏತ ನೀರಾವರಿ ಯೋಜನೆ ಕಾಮಗಾರಿಗೆ ತಡೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡದೆ ಆರಂಭಿಸಿರುವ ಕಾಮಗಾರಿಗೆ ತಡೆ ನೀಡುವಂತೆ ಕೋರಿ ಬಸವನಹಳ್ಳಿ ಗ್ರಾಮದ ಗಾಯಿತ್ರಿ ಎಂಬುವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾ. ಆರ್.ದೇವದಾಸ್ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲ ಕೆ.ಆರ್. ಲಿಂಗರಾಜುರ ವಾದ ಆಲಿಸಿದ ಪೀಠ, ನ್ಯಾಯಾಲಯದ ಮುಂದಿನ ಆದೇಶದವರೆಗೆ ಅರ್ಜಿದಾರರಿಗೆ ಸಂಬಂಧಿಸಿದ ಭೂಮಿಯಲ್ಲಿ ಯೋಜನೆಯ ಕಾಮಗಾರಿಯನ್ನು ಮುಂದುವರಿಸಲು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಮಧ್ಯಂತರ ಆದೇಶ ನೀಡಿತು. ಇದೇ ವೇಳೆ, ರಾಜ್ಯ ಸರ್ಕಾರ, ಕಾವೇರಿ ನೀರಾವರಿ ನಿಗಮ, ಹಾಸನ ಜಿಲ್ಲಾಧಿಕಾರಿ, ಹೇಮಾವತಿ ನೀರಾವರಿ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೊಟೀಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ವಾದಿಸಿದ ವಕೀಲ ಲಿಂಗರಾಜು, ಯೋಜನೆಗೆ ಕಾನೂನು ರೀತಿಯಲ್ಲಿ ಭೂಸ್ವಾಧೀನ ಮಾಡಿಕೊಳ್ಳದೆ, ರೈತರಿಗೆ ನ್ಯಾಯಯುತ ಪರಿಹಾರವನ್ನೂ ನೀಡದೆ ರೈತರ ಜಮೀನಿನಲ್ಲಿ ಏತ ನೀರಾವರಿ ಯೋಜನೆ ಕಾಮಗಾರಿ ಕೈಗೊಳ್ಳಲಾಗಿದೆ. ಯೋಜನೆಯ ಬಗ್ಗೆ ರೈತರಿಗೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ ಎಂದು ವಿವರಿಸಿದರು.