ಸಕಲೇಶಪುರ: ಪಟ್ಟಣದ ಜನರಿಗೆ ಹೇಮಾವತಿ ನದಿ ನೀರು ಶುದ್ದೀಕರಣ ಮಾಡದೇ ಕಲುಷಿತ ನೀರು ನೀಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.
ಹೇಮಾವತಿ ನೀರು ಶುದ್ಧೀಕರಿಸದ ಆರೋಪ: ಸಕಲೇಶಪುರ ಕರವೇ ಪ್ರತಿಭಟನೆ - ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ
ಪಟ್ಟಣದಲ್ಲಿ ಹಾದು ಹೋಗಿರುವ ಹೇಮಾವತಿ ನದಿಯಿಂದ ಜನರಿಗೆ ಕುಡಿವ ನೀರು ಒದಗಿಸಲಾಗ್ತಿದೆ. ಆದರೆ, ಅದನ್ನು ಶುದ್ಧೀಕರಿಸುತ್ತಿಲ್ಲ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರು ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಪುರಸಭೆವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಮುಖ್ಯಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಕೆಲ ಸಮಯ ಧರಣಿ ಕುಳಿತರು. ಪ್ರತಿಭಟನೆ ವೇಳೆ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಗೌಡ ಮಾತನಾಡಿ, ಎಸಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಅಧಿಕಾರಿಗಳಿಗೆ ಬಡವರ ಬಗ್ಗೆ ಕಾಳಜಿ ಇರುವುದಿಲ್ಲ. ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಇನ್ನು ಸಂಘಟನೆಯ ತಾಲೂಕು ಅಧ್ಯಕ್ಷ ಸಾಗರ್ ಜಾನೆಕೆರೆ ಮಾತನಾಡಿ, ಪಟ್ಟಣದಲ್ಲಿ ಹಾದು ಹೋಗಿರುವ ಹೇಮಾವತಿ ನದಿಯಿಂದ ಜನರಿಗೆ ಕುಡಿಯುವ ನೀರನ್ನು ಒದಗಿಸುತ್ತಿರುವುದು ಸರಿಯಷ್ಟೇ. ಆದರೆ ಶುದ್ಧೀಕರಣ ಘಟಕದಲ್ಲಿ ಯಂತ್ರಗಳು ಕೆಟ್ಟುಹೋಗಿದ್ದು, ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೇ ಪುರಸಭೆಯಿಂದ ಶುದ್ದ ಕುಡಿಯುವ ನೀರನ್ನು ಜನರಿಗೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದರು.