ಹಾಸನ:ನಾಲೆಗೆ ನೀರು ಹರಿಸದೇ ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ವಿರೋಧಿಸಿ ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬರಗಾಲದಲ್ಲಿಯೂ ಹೇಮೆಯ ಒಡಲಿನಿಂದ ತಮಿಳುನಾಡಿಗೆ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಈಟಿವಿ ಭಾರತ ಸಮಗ್ರ ಸುದ್ದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಅರಕಲಗೂಡು ಶಾಸಕ ಎಟಿ ರಾಮಸ್ವಾಮಿ, ಹೇಮಾವತಿ ಎಡದಂಡೆ ನಾಲೆ ಕಚೇರಿ ಮುಂದೆ ಸುಮಾರು ಎರಡು ಗಂಟೆಗಳ ಕಾಲ ಪ್ರತಿಭಟನೆ ಮಾಡಿ ನಂತರ ಕಚೇರಿಗೆ ಮುತ್ತಿಗೆ ಹಾಕಿದರು.
ಈಗಾಗಲೇ ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದೆ. ಜಲಾಶಯ ಕೂಡ ನೀರಿಲ್ಲದೆ ಭಣಗುಡುತ್ತಿವೆ. ಕಳೆದ 15 ದಿನಗಳ ಹಿಂದಷ್ಟೇ ಮಲೆನಾಡು ಭಾಗದಲ್ಲಿ ಮಳೆಯಾಗಿದ್ದರಿಂದ 10 ಟಿಎಂಸಿ ನೀರು ಶೇಖರಣೆಯಾಗಿದೆ. ಜಿಲ್ಲೆಯ ಜನ-ಜಾನುವಾರುಗಳು ಕೂಡ ನೀರಿಗೆ ಹಾಹಾಕಾರ ಪಡುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಮಲತಾಯಿ ಧೋರಣೆ. ತಮಿಳುನಾಡಿಗೆ ನೀರು ಹರಿಸುವ ಬದಲು ದಯಮಾಡಿ ಹೇಮಾವತಿ ಎಡದಂಡೆ ನಾಲೆಗೆ ಹರಿಸುವ ಮೂಲಕ ಜಿಲ್ಲೆಯ ರೈತಾಪಿ ವರ್ಗದ ಹಿತ ಕಾಯಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಮತ್ತಷ್ಟು ಉಗ್ರ ಸ್ವರೂಪದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಹೇಮಾವತಿ ಎಡದಂಡೆ ನಾಲೆ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಶಾಸಕರು ಕಚೇರಿಗೆ ಮುತ್ತಿಗೆ ಹಾಕುವ ಸೂಚನೆ ಅರಿತ ಪೊಲೀಸರು, ಕಚೇರಿ ಒಳ ಪ್ರವೇಶಿಸದಂತೆ ಗೇಟ್ ಬಂದ್ ಮಾಡುವ ಮೂಲಕ ಪ್ರತಿಭಟನಾಕಾರರನ್ನು ನಿಯಂತ್ರಿಸಿದ್ರು. ಈ ವೇಳೆ ಶಾಸಕ ಎ ಟಿ ರಾಮಸ್ವಾಮಿ ಸೇರಿದಂತೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.