ಹಾಸನ: ಅದು ಹೊಯ್ಸಳರ ನಾಡು, ಶಿಲ್ಪಕಲಾಕೃತಿಗಳ ಸೌಂದರ್ಯದ ಬೀಡು. ಗೊಮ್ಮಟೇಶ್ವರನ ಬೃಹತ್ ಮೂರ್ತಿಯನ್ನು ಹೊಂದಿದ ಹೆಗ್ಗಳಿಕೆಯ ಜಿಲ್ಲೆ. ಇಂಥ ಸಾಂಸ್ಕೃತಿಕ ಹಿರಿಮೆ ಹೊಂದಿರುವ ನಾಡಿನಲ್ಲಿ ಇತ್ತೀಚೆಗೆ ಸ್ವಚ್ಛತೆ ಮಾತ್ರ ಮರೀಚಿಕೆಯಾಗುತ್ತಿದೆ.
ಗಬ್ಬುನಾರುತ್ತಿದೆ ಹಾಸನ, ತ್ಯಾಜ್ಯ ಸೇರಿ ಮಲಿನವಾಗುತ್ತಿದೆ ಜೀವನದಿ ಹೇಮಾವತಿ ಹಾಸನ ನಗರದ ಹೃದಯಭಾಗದಲ್ಲಿರುವ ದೊಡ್ಡ ಚರಂಡಿ, ಸತ್ಯಮಂಗಲ, ಡೈರಿ ಸರ್ಕಲ್, ಪೃಥ್ವಿ ಚಿತ್ರಮಂದಿರ, ರೈಲ್ವೆ ನಿಲ್ದಾಣ, ಕುವೆಂಪು ನಗರ, ಬಿ.ಎಂ.ರಸ್ತೆ, ಸೇರಿದಂತೆ ಪ್ರಮುಖ ಬಡಾವಣೆಗಳಿಂದ ಹರಿದು ಬರುವ ತ್ಯಾಜ್ಯ ಈ ಭಾಗದಲ್ಲಿ ಓಡಾಡುವ ಜನರಿಗೆ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತಿದೆ.
ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯ ನಡುವೆಯೇ ಬೃಹತ್ ಚರಂಡಿ ಹರಿಯುತ್ತಿದ್ದು, ಈ ಭಾಗದಲ್ಲಿ ಪ್ರತಿನಿತ್ಯ ಒಂದು ಲಕ್ಷಕ್ಕೂ ಅಧಿಕ ಮಂದಿ ಓಡಾಟ ನಡೆಸುತ್ತಾರೆ. ಈ ಭಾಗದಲ್ಲಿ ಓಡಾಡುವುದು ತುಂಬಾ ಕಷ್ಟವಾಗುತ್ತಿದ್ದು, ಮಾಸ್ಕ್ ಹಾಕಿದ್ರೂ ತ್ಯಾಜ್ಯದ ವಾಸನೆ ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿ ಹಾಸನದ ಜನತೆ ಮೂಗು ಮುಚ್ಚಿ ಸಂಚರಿಸಬೇಕಾದ ನರಕಯಾತನೆ ಅನುಭವಿಸುತ್ತಿದ್ದಾರೆ.
ಹಾಸನ ಎಂದರೆ ಮಾಜಿ ಪ್ರಧಾನಿಗಳ ಜಿಲ್ಲೆ, ಶಿಲ್ಪ ಕಲೆಗಳ ತವರೂರು ಎಂದೆಲ್ಲಾ ಕರೆಯಲ್ಪಡುತ್ತಿದೆ. ಆದ್ರೆ ನಗರ ಮಾತ್ರ ಗಬ್ಬು ನಾರುತ್ತಿದೆ. ಅಷ್ಟೇ ಅಲ್ಲ, ಇಲ್ಲಿ ಹರಿಯುತ್ತಿರುವ ತ್ಯಾಜ್ಯ ಬೀರನಹಳ್ಳಿ ಮುಖಾಂತರ ಹಲುವಾಗಿಲು ಕೆರೆ ಸೇರಿ ನಂತರ ಹೇಮಾವತಿ ನದಿ ಸೇರುತ್ತಿರುವುದು ಆತಂಕ ಹೆಚ್ಚಿಸಿದೆ.