ಹಾಸನ:ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿದ್ದ ಮಳೆಯ ಅಬ್ಬರ ಕೊಂಚ ತಗ್ಗಿದೆ. ನಗರದಲ್ಲಿ ಮಂಗಳವಾರ ಮಧ್ಯಾಹ್ನದಿಂದಲೇ ಬಿಡುವು ನೀಡಿದ್ದ ಮಳೆ ಬುಧವಾರ ಹಾಗೂ ಗುರುವಾರ ಆಗೊಮ್ಮೆ ಈಗೊಮ್ಮೆ ಬರುವುದು ಬಿಟ್ಟರೆ ಬಹುತೇಕ ವಿರಾಮ ನೀಡಿದ್ದು, ಹೇಮಾವತಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ.
ನಿರಂತರ ಮಳೆಯಿಂದ ಅಕ್ಷರಶಃ ನಲುಗಿ ಹೋಗಿದ್ದ ಸಕಲೇಶಪುರ ತಾಲೂಕಿನಲ್ಲಿ ವರ್ಷಧಾರೆಯ ಮೊರೆತ ಕೊಂಚ ಕಡಿಮೆಯಾಗಿದೆ. ಇದೇ ರೀತಿ ಆಲೂರು, ಬೇಲೂರು ಹಾಗೂ ಅರಕಲಗೂಡು ತಾಲೂಕುಗಳಲ್ಲೂ ಮಳೆಯ ಅಬ್ಬರ ತಗ್ಗಿದೆ. ಸುರಿಯುತ್ತಿದ್ದ ಮಳೆಯಿಂದಾಗಿ ಅಕ್ಷರಶಃ ತತ್ತರಿಸಿ ಹೋಗಿದ್ದ ಮಲೆನಾಡು ಭಾಗದ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.