ಹಾಸನ: ಜಿಲ್ಲೆಯಾದ್ಯಂತ ಗುರುವಾರ ಭಾರಿ ಮಳೆಯಾಗಿದೆ. ಆಲೂರು, ಅರಕಲಗೂಡು, ಬೇಲೂರು, ಹಾಸನ, ಸಕಲೇಶಪುರ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಜಲಾನಯನ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಆಲೂರಿನ ವಾಟೆಹೊಳೆ ಜಲಾಶಯಗಳು ಭರ್ತಿ ಹಂತಕ್ಕೆ ತಲುಪಿದ್ದು, ಬೇಲೂರಿನ ಯಗಚಿ ಜಲಾಶಯದಿಂದ ನೀರು ಹರಿಸಲಾಗಿದೆ.
ಹಾಸನ ನಗರದಲ್ಲಿ ಬಿಡುವು ನೀಡಿ ಸುರಿಯುತ್ತಿದೆ. ಜನರು ಮನೆಯಲ್ಲಿಯೇ ತೊಯ್ದುಕೊಂಡು ಓಡಾಡುವಂತಾಗಿದೆ. ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗಿ ಸಾಕಷ್ಟು ಸಮಸ್ಯೆ ಆಗಿದೆ. ಹಲವು ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ಅಡ್ಡಿಯಾಯಿತು.
ಕೊರೊನಾ ಸೋಂಕಿತರು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನತೆ ಭಯಭೀತಿಗೊಂಡಿದ್ದಾರೆ. ಅಲ್ಲದೆ, ಜಮೀನುಗಳಲ್ಲಿ ನೀರು ನಿಂತು ತಂಬಾಕು ಸೇರಿದಂತೆ ವಿವಿಧ ಬೆಳೆಗಳು ಕೊಳೆತು ಅಪಾರ ನಷ್ಟವುಂಟಾಗಿದೆ. ಮಳೆಗಾಗಿ ಮುಗಿಲು ನೋಡುತ್ತಿದ್ದ ರೈತಾಪಿ ವರ್ಗ ಕೃಷಿ ಕಾರ್ಯಗಳನ್ನು ಕೈಗೊಂಡು ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು.
ಈಗ ಅತಿವೃಷ್ಟಿಯಿಂದಾಗಿ ಕೆಲವು ಕಡೆಗಳಲ್ಲಿ ಜಮೀನಿನಲ್ಲಿ ನೀರು ನಿಂತು ಶುಂಠಿ, ಆಲೂಗೆಡ್ಡೆ ಮತ್ತು ಜೋಳ ಬೆಳೆಗಳು ಕೊಳೆಯಲಾರಂಭಿಸಿವೆ. ರೈತರು ವ್ಯವಸಾಯ ಮಾಡಲು ಆಗುತ್ತಿಲ್ಲ. ಇಳುವರಿ ಮೇಲೆ ಭಾರಿ ಪರಿಣಾಮ ಬೀರಿದೆ. ಸುಮಾರು ಒಂದು ತಿಂಗಳ ಹಿಂದೆ ಬಿದ್ದ ಮಳೆಗೆ ಸಸಿ ಮಡಿ ಮಾಡಿ ಬೆಳೆ ಮಾಡಲಾಗಿದ್ದು, ಕಳೆದ ಮೂರು ದಿವಸಗಳಿಂದ ಜಡಿ ಮಳೆಯಿಂದ ಈ ಭಾಗದ ಬೆಳೆಯಲ್ಲಿ ನೀರು ನಿಂತಿದೆ.
ಪರಿಹಾರ ಅತ್ಯಲ್ಪ:ಸರ್ಕಾರ ಬೆಳೆ ಹಾನಿಗೆ ಕೊಡುವ ಪರಿಹಾರವೂ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆ ಹಾನಿಗೆ ಸುಮಾರು 5 ಸಾವಿರ ರೂ, ನೀರಾವರಿ ಪ್ರದೇಶಗಳಿಗೆ 8 ಸಾವಿರ ರೂ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಯಾವುದೇ ಪ್ರಕೃತಿ ವಿಕೋಪ ಇಲ್ಲದೆ ರೈತನಿಗೆ ಉತ್ತಮ ಬೆಲೆ ಸಿಕ್ಕಿದರೆ ಪ್ರತಿ ಎಕರೆಗೆ ಶುಂಠಿಗೆ 40 ಸಾವಿರ, ಆಲೂಗೆಡ್ಡೆಗೆ 30 ಸಾವಿರ, ಮುಸುಕಿನ ಜೋಳಕ್ಕೆ 10 ರಿಂದ 12 ಸಾವಿರ, ಮೆಣಸೀನಕಾಯಿ ಇತರ ತರಾಕಾರಿಗಳಲ್ಲಿ 5 ಸಾವಿರ ರೂ. ಸಿಗುತ್ತದೆ.
ನೀರು ಬಿಡಲು ಒತ್ತಾಯ;ಈ ಬಾರಿ ಮೂರು ದಿವಸದಿಂದ ಜಡಿ ಮಳೆಯಾಗಿ ಹೇಮಾವತಿ, ಕಾವೇರಿ ನದಿಗೆ ನೀರು ಹರಿಯುತ್ತಿರುವುದರಿಂದ ನೀರಾವರಿ ಪ್ರದೇಶದಲ್ಲಿ ಬತ್ತದ ಮಡಿ ಮಾಡಲು ಇದು ಸಕಾಲವಾಗಿದೆ. ಒಮ್ಮೆಮ್ಮೆ ಅನಾವೃಷ್ಟಿಯಿಂದ ಬೆಳೆ ಒಣಗುತ್ತದೆ. ಮತ್ತೊಮ್ಮೆ ಅತಿವೃಷ್ಟಿಯಿಂದ ಬೆಳೆಗೆ ಹಾನಿಯಾಗುತ್ತವೆ ಎಂಬುದು ಕೃಷಿಕರ ದಾರುಣ ಪರಿಸ್ಥಿತಿಯಾಗಿದೆ.