ಸಕಲೇಶಪುರ (ಹಾಸನ): ಕಳೆದ 2 ದಿನಗಳಿಂದ ತಾಲೂಕಿನಲ್ಲಿ ಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಮರಗಳು ಧರೆಗುರುಳಿ ಅಪಾರ ಹಾನಿ ಸಂಭವಿಸಿದೆ. ಜಿಲ್ಲೆಯ ಹಲವೆಡೆ ಕಳೆದ ವಾರದ ಹಿಂದೆ ಹದವಾದ ಮಳೆಯಾಗಿದ್ದು, ಆದರೆ ಕಳೆದೆರಡು ದಿನಗಳಿಂದ ಭರ್ಜರಿ ಮಳೆಯಾಗುತ್ತಿದೆ.
ಭಾರೀ ಮಳೆಗಾಳಿಯಿಂದ ತಾಲೂಕಿನ ಹಲವೆಡೆ ಮರಗಳು ಧರೆಗುರುಳಿದ್ದು, ಕೆಲವು ಕಡೆಗಳಲ್ಲಿ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದಿದ್ದರಿಂದ ಹಲವು ಗ್ರಾಮಗಳು ಕತ್ತಲಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿ ಸಹ ಹಲವೆಡೆ ಮರಗಳು ಬಿದ್ದಿದ್ದರಿಂದ ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯುತ್ ಸಂರ್ಪಕವಿರಲಿಲ್ಲ.
ಸಕಲೇಶಪುರ: 2 ದಿನದಿಂದ ಸಂಕಷ್ಟ ತಂದಿಟ್ಟ ವರುಣ...ಹಲವೆಡೆ ಧರೆಗುರುಳಿದ ಮರಗಳು ಪಟ್ಟಣದ ಶ್ರೀನಿವಾಸ್ ಹೋಟೆಲ್ ಪಕ್ಕದಲ್ಲಿರುವ ಆರೋಗ್ಯ ಇಲಾಖೆಗೆ ಸೇರಿರುವ ಮನೆಯೊಂದರ ಮೇಲೆ ಭಾರಿ ಮರವೊಂದು ಬಿದ್ದ ಪರಿಣಾಮ ಮನೆಯಲ್ಲಿದ್ದ ನರ್ಸ್‌ನ ತಾಯಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಅಲ್ಲದೆ ಬೈಕೆರೆ ಗ್ರಾಮದ ದಿನೇಶ್ ಎಂಬುವವರ ಮನೆ ಮೇಲೆ ಮರವೊಂದು ಉರುಳಿದ್ದು, ಹಾನಿ ಉಂಟಾಗಿದೆ. ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಪಟ್ಲ, ಕಲ್ಲಹಳ್ಳಿ, ಬಾಣಗೇರಿ, ನೇರಡಿ, ಬಿಸ್ಲೆ, ಹಿಜ್ಜನಹಳ್ಳಿ, ಕಾಗೆನಹರೆ, ಎಡೆಕುಮೇರಿ, ಬಾಳೆಹಳ್ಳ, ಮಂಕನಹಳ್ಳಿ, ಮಾಯನೂರು ಭಾಗದಲ್ಲಿ ಭರ್ಜರಿ ಮಳೆಯಾಗಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ಸಕಲೇಶಪುರದಲ್ಲಿ 86.8 ಮಿ.ಮೀ, ಹೊಸೂರು 103.3 ಮಿ.ಮೀ, ಶುಕ್ರವಾರ ಸಂತೆ 159 ಮಿ.ಮೀ., ಹೆತ್ತೂರು 175.2 ಮಿ.ಮೀ, ಯಸಳೂರು 122 ಮಿ.ಮೀ, ಬಾಳ್ಳುಪೇಟೆ 42 ಮಿ.ಮೀ, ಬೆಳಗೋಡು 53.2 ಮಿ.ಮೀ, ಮಾರನಹಳ್ಳಿ 197.1 ಮಿ.ಮೀ, ಹಾನುಬಾಳು 96 ಮಿ.ಮೀ, ಮಳೆಯಾಗಿದೆ.