ಹಾಸನ :ಹಲವು ದಿನಗಳ ಬಿಡುಗಡೆ ಬಳಿಕ ಮಲೆನಾಡು ಸೇರಿದಂತೆ ಜಿಲ್ಲೆಯಲ್ಲಿ ವಿವಿಧಡೆ ಮತ್ತೆ ಮಳೆ ಆರ್ಭಟ ಶುರುವಾಗಿದೆ.
ಕಳೆದ ಮೂರು ದಿನಗಳಿಂದ ಹಾಸನ, ಆಲೂರು, ಬೇಲೂರು, ಚನ್ನರಾಯಪಟ್ಟಣ, ಶ್ರವಣಬೆಳಗೊಳ ಹಾಗೂ ಸಕಲೇಶಪುರ ತಾಲೂಕುಗಳಲ್ಲಿ ಬಿಟ್ಟು ಬಿಡದೇ ಮಳೆ ಬರಲಾರಂಭಿಸಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯಲ್ಲಿ ಬರುತ್ತಿರುವ ಮಳೆಯಿಂದಾಗಿ ಶುಂಠಿ ಬೆಳೆ ಹಾಳಾಗಿದೆ. ಕೃಷಿ ಪ್ರಧಾನ ಜಿಲ್ಲೆಯಲ್ಲಿ ಬೆಳೆಯುವ ವಾಣಿಜ್ಯ ವಹಿವಾಟಿನ ಮೇಲೆ ತೀವ್ರತರವಾದ ಪರಿಣಾಮ ಬೀರುವ ಲಕ್ಷಣ ಗೋಚರಿಸುತ್ತಿದೆ.
ಹಾಸನದಲ್ಲಿ ಬಿಡದೆ ಸುರಿಯುತ್ತಿರುವ ಮಳೆ ಆರ್ಥಿಕ ಮುಗ್ಗಟ್ಟಿನ ನಡುವೆ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆ ಕೈಗೆ ಬಂದದ್ದು, ಬಾಯಿಗೆ ಬರದಂತಾಗಿದೆ. ಸೆ.3 ರ ತನಕ ವಾಡಿಕೆ ಮಳೆ 735 ಮಿ.ಮೀಗೆ ಬದಲಾಗಿ 968 ಮಿ.ಮೀಟರ್ ಮಳೆಯಾಗಿದೆ. ಶೇ.38 ರಷ್ಟು ಹೆಚ್ಚುವರಿ ಮಳೆಯಾಗಿದೆ. ಜಿಲ್ಲೆಯ ಹಲವೆಡೆ ಸೋಮವಾರದಿಂದ ಬಿರುಸಿನ ಹಾಗೂ ಸಾಧಾರಣ ಮಳೆಯಾಗುತ್ತಿದ್ದು, ಮೊದಲೇ ಹಳ್ಳ, ಕೊಳ್ಳ, ಕೆರೆ, ನದಿ ತುಂಬಿ ಹರಿಯುತ್ತಿದ್ದು, ಈ ನಡುವೆ ಮತ್ತೊಮ್ಮೆ ಪ್ರವಾಹದ ಆತಂಕ ತಂದೊಡ್ಡಿದೆ.
ಮಲೆನಾಡು ಪ್ರದೇಶವಾದ ದೇಶಪುರ ತಾಲೂಕಿನಲ್ಲಿ ಬುಧವಾರ 60 ರಿಂದ 80 ಮಿ.ಮೀ ಮಳೆಯಾಗಿದ್ದು, ಗುರುವಾರ ಕೂಡ ಮಳೆ ಮುಂದುವರಿದಿದೆ.
ಇನ್ನು ಸಕಲೇಶಪುರ ತಾಲೂಕಿನ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ತೋಟವಿದ್ದು, ಮಳೆಯಿಂದಾಗಿ ಕಾಫಿ ಕಾಯಿ ಉದುರುವ ಹಾಗೂ ಕೊಳೆರೋಗ ಲಕ್ಷಣ ಕಂಡು ಬರುತ್ತಿದೆ. ಇದೇ ಸ್ಥಿತಿ ಮೆಣಸು, ಏಲಕ್ಕಿ, ಅಡಿಕೆ ಬೆಳೆಗೂ ಆಗಿದೆ. ಕಾಫಿ ಕೈಕೊಟ್ಟರೂ ಮೆಣಸು, ಏಲಕ್ಕಿ ಹಿಡಿಯುತ್ತದೆ ಎಂಬ ನಂಬಿಕೆಯಿಂದ ಇದ್ದ ಕಾಫಿ ಬೆಳೆಗಾರರು ಎಲ್ಲ ಬೆಳೆ ಕಳೆದುಕೊಂಡು ಸಂಕಷ್ಟಕ್ಕೀಡಾಗುವ ಸ್ಥಿತಿಯಲ್ಲಿದ್ದಾರೆ.
ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ನಿರೀಕ್ಷೆಯಿತ್ತು. ಪ್ರಸ್ತುತ 16 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ. ಭತ್ತಕ್ಕೆ ಮಳೆ ಅನುಕೂಲವಾಗಿದ್ದರೂ, ಭಾರಿ ಪ್ರಮಾಣದ ಮಳೆಯಾಗಿ ಕೊಚ್ಚಿ ಹೋಗುವ ಸ್ಥಿತಿ ನಿರ್ಮಾಣವಾಗಿ ಬೆಳೆ ಹಾನಿಯಾಗುವ ಸನ್ನಿವೇಶ ಕಂಡು ಬಂದಿದೆ.
10 ಕೋಟಿ ರೂ. ಬೆಳೆ ನಾಶ :
ಮಳೆಯ ಆರ್ಭಟದಿಂದ ಸಕಲೇಶಪುರ - ಆಲೂರು, ಹಾಸನ ತಾಲೂಕಿನಲ್ಲಿ ಕಾಫಿ, ಮೆಣಸು, ಏಲಕ್ಕಿ, ಶುಂಠಿ, ಆಲು ಸೇರಿದಂತೆ 8,396 ಪ್ರದೇಶದ ಬೆಳೆ ಹಾನಿಯಾಗಿದ್ದು, 10 ಕೋಟಿ ನಷ್ಟವಾಗಿದೆ.
ಭೂಕುಸಿತ :ಸಕಲೇಶಪುರ ತಾಲೂಕಿನಲ್ಲಿ ಭಾರಿ ಮಳೆಯಿಂದ ಭೂಕುಸಿತ ಉಂಟಾಗಿ ನೂರಾರು ಕಾಫಿತೋಟ ಭೂಮಿಯಲ್ಲಿ ಹುದುಗಿ ಹೋಗಿದೆ. ಕೆಸರಿನಿಂದ ತನ್ನ ಸ್ವರೂಪ ಕಳೆದುಕೊಂಡಿದ್ದು, ಕೃಷಿ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಲಾನಯನ ಪ್ರದೇಶಗಳಾದ ಸಕಲೇಶಪುರ, ಮೂಡಿಗೆರೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹೇಮಾವತಿ ಜಲಾಶಯಕ್ಕೆ ಒಳಹರಿವು ಏರಿಕೆಯಾಗಿದೆ. ಸೆಪ್ಟೆಂಬರ್ 2 ರಂದು 6,949 ಇದ್ದ ಒಳಹರಿವು ಸೆಪ್ಟೆಂಬರ್ 5 ರಂದು 14,660 ಕ್ಯೂಸೆಕ್ ಗೆ ಏರಿದೆ.