ಹಾಸನ: ಮಲೆನಾಡಿನಲ್ಲಿ ದಿನದಿಂದ ದಿನಕ್ಕೆ ಮುಂಗಾರಿನ ಅಬ್ಬರ ಹೆಚ್ಚಾಗುತ್ತಿದ್ದು, ಜಿಲ್ಲೆಯ ಜೀವನದಿ ಹೇಮಾವತಿ ಡ್ಯಾಂಗೆ ಒಳಹರಿವಿನ ಪ್ರಮಾಣವೂ ಏರಿಕೆಯಾಗಿದೆ.
ಪಶ್ಚಿಮ ಘಟ್ಟಗಳಾದ ಬಿಸಿಲೆ, ಮೂಡಿಗೆರೆ, ಚಿಕ್ಕಮಗಳೂರು ಭಾಗದಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ಎರಡು ದಿನಗಳಿಂದ ಒಂದೇ ಸಮನೆ ಮಳೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಹೇಮಾವತಿಗೆ ಎರಡು ದಿನದಲ್ಲಿ ಎರಡು ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ. ಇಂದು ಕೂಡಾ 17ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜೀವನದಿ ತನ್ನೊಡಲಿಗೆ ನೀರನ್ನ ತುಂಬಿಕೊಳ್ಳುತ್ತಿದೆ. ಹೇಮಾವತಿ ನದಿ ಪಾತ್ರದ ಕೆಂಪುಹೊಳೆ ಸೇರಿದಂತೆ ಹಳ್ಳಕೊಳ್ಳ, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ.
ಈ ಬಾರಿ ನಿಗದಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದೆ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿತ್ತು. ಅಗಾಗ್ಗೆ ಬಿದ್ದ ಅಲ್ಪಸ್ವಲ್ಪ ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದ ರೈತರು ಮಳೆ ಕೈಕೊಟ್ಟಿದ್ದರಿಂದ ಆತಂಕಕ್ಕೆ ಒಳಗಾಗಿದ್ದರು. ಈಗ ಅಬ್ಬರಿಸುತ್ತಿರುವ ಮಳೆಯಿಂದ ರೈತರು ಒಂದು ಕಡೆ ಸಂತಸ ಪಟ್ಟುಕೊಂಡರೂ ಅತಿಯಾದ ಮಳೆ ಕೆಲವೆಡೆ ಆತಂಕ ಸೃಷ್ಟಿಸಿದೆ.