ಹಾಸನ: ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಸುರಿದಿದ್ದರಿಂದ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಮಲೆನಾಡು ಭಾಗಗಳಾದ ಸಕಲೇಶಪುರದ ಹೆತ್ತೂರು ಆಲೂರು ಭಾಗದಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಮನೆಗಳಿಗೆ ಹಾನಿಯಾಗಿದ್ದು, ಹಲವೆಡೆ ಮರಗಳು ಉರುಳಿ ಬಿದ್ದಿವೆ. ಅರೆ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದೆ. ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಿದ ಜೋರು ಮಳೆಯಿಂದ ಜನರು ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ರಸ್ತೆಗಳಲ್ಲಿ ನೀರು ನಿಂತು ಸವಾರರು ಪರದಾಡುತ್ತಿದ್ದಾರೆ.
ಮಲೆನಾಡು ಭಾಗದಲ್ಲಿ ಜನರು ಮನೆಯಿಂದ ಹೊರ ಬರಲು ಆಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ಜಿಟಿಜಿಟಿ ಮಳೆಯಾಗುತ್ತಿದ್ದು, ಜನರ ನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆಯಾಯಿತು. ಎಡಬಿಡದೆ ಸುರಿಯುತ್ತಿರುವ ಮಳೆಗೆ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಅರಕಲಗೂಡು, ಕೊಣನೂರು ಭಾಗದಲ್ಲಿ ನದಿ ಪಾತ್ರದ ಜನರಲ್ಲಿ ಆತಂಕ ಎದುರಾಗಿದೆ.
ಮೂಡಿಗೆರೆ ಮತ್ತು ಸಕಲೇಶಪುರದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ಹೇಮಾವತಿ ಜಲಾಶಯಕ್ಕೆ 12 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. 15 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. 3 ದಿನಗಳಿಂದ ವ್ಯಾಪಕ ಮಳೆಯಾಗುವ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದು, ಹೇಮಾವತಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಜಿಲ್ಲೆಯಲ್ಲಿನ ಮಳೆ ವರದಿ:
ಜಿಲ್ಲೆಯಲ್ಲಿ ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 10 ಮಿ.ಮೀ., ಗೊರೂರು 10.1 ಮಿ.ಮೀ., ಹಾಸನದಲ್ಲಿ 9.4 ಮಿ.ಮೀ., ಶಾಂತಿಗ್ರಾಮದಲ್ಲಿ 8 ಮಿ.ಮೀ., ಕಟ್ಟಾಯ 6.3 ಮಿ.ಮೀ., ದುದ್ದ 6 ಮಿ.ಮೀ. ಮಳೆಯಾಗಿದೆ.