ಹಾಸನ:ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಅದರಂತೆ ಜಿಲ್ಲೆಯಲ್ಲೂ ಮಳೆಯಾಗುತ್ತಿದ್ದು, ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
ಹಾಸನದಲ್ಲಿ ಅಕಾಲಿಕ ಮಳೆ : ಕಾಫಿ ಬೆಳೆಗಾರರು ಕಂಗಾಲು - ಹಾಸನದಲ್ಲಿ ಅಕಾಲಿಕ ಮಳೆ
ರಾಜ್ಯದ ಕೆಲ ಭಾಗಗಳಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಹಾಸನ ಜಿಲ್ಲೆಯಲ್ಲೂ ಮಳೆಯಾಗುತ್ತಿದ್ದು, ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದಿರುವ ಕಾಫಿ ಬೆಳೆ ಹಾನಿಗೊಳಗಾಗಿದೆ.
ಜಿಲ್ಲೆಯಲ್ಲಿ ಕಳೆದ ಡಿ. 30ರಿಂದ ಮಳೆ ಪ್ರಾರಂಭವಾಗಿದ್ದು, ನಿರಂತರ ಮಳೆಯಾಗುತ್ತಿದೆ. ಸಕಲೇಶಪುರದ ಮಾಗೇರಿ, ಬಿಸಿಲೆ, ಅತ್ತಿಹಳ್ಳಿ, ಐಗೂರು, ಚಿನ್ನಹಳ್ಳಿ, ಹೆತ್ತೂರು, ಯಸಳೂರು, ವಣಗೂರು ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಕೈಗೆ ಬರುವ ಹೊತ್ತಿನಲ್ಲಿ ಕಾಫಿ ಬೆಳೆ ಸಂಪೂರ್ಣ ಮಳೆಯಲ್ಲಿ ತೋಯ್ದು ಹಾಳಾಗುತ್ತಿದೆ. ಕಣದಲ್ಲಿ ಹೊರ ಹಾಕಿರುವ ಕಾಫಿ ಬೀಜಗಳು ಜಿಟಿಜಿಟಿ ಮಳೆಗೆ ಕರಗುತ್ತಿದೆ.
ಬಹುತೇಕ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಮಲೆನಾಡಿನಲ್ಲಿ ಮಳೆಯಾಗುವುದು ತೀರಾ ಕಡಿಮೆ. ಈಗ ಒಕ್ಕಣೆ ಮಾಡುವ ಸಮಯ. ಇಂತಹ ಸಂದರ್ಭದಲ್ಲಿ ಸಾವಿರಾರು ಎಕರೆಯಲ್ಲಿ ಬೆಳೆದು ಒಕ್ಕಣೆಗೆ ಸಿದ್ಧ ಮಾಡಿಕೊಂಡಿರುವ ಸಂದರ್ಭದಲ್ಲಿಯೇ ರೈತರು ಬೆಳೆದಿರುವ ಭತ್ತ ಮತ್ತು ಕಾಫಿ ಬೆಳೆಗಳು ನೀರು ಪಾಲಾಗಿವೆ. ಅಕಾಲಿಕ ಮಳೆಯಿಂದ ನೂರಾರು ಮಂದಿ ಕಾಫಿ ಬೆಳಗಾರರು ಹಾಗೂ ಮಲೆನಾಡಿನ ರೈತರ ಬದುಕು ಬೀದಿಗೆ ಬಿದ್ದಂತಾಗಿದೆ.