ಹಾಸನ:ಮಲೆನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸಕಲೇಶಪುರ ಹೈರಾಣಾಗಿದೆ. ಹಾಸನದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ರು ಮಲೆನಾಡು ಭಾಗದ ಚಿಕ್ಕಮಗಳೂರು ಮತ್ತು ಮೂಡಿಗೆರೆ ಭಾಗದಲ್ಲಿ ಭೋರ್ಗರೆದು ಸುರಿಯುತ್ತಿರುವ ಮಳೆಯಿಂದ ಈ ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ವಾರದಿಂದ ಸುರಿಯುತ್ತಿರುವ ಮಳೆ ಮುಂದುವರೆದಿದ್ದು, ಹೇಮಾವತಿ ನದಿಯಿಂದ 1.3 ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿರುವುದರಿಂದ ಸಕಲೇಶಪುರದ ಹಲವು ಬಡಾವಣೆಗಳು ಜಲಾವೃತಗೊಂಡು, ಕೆರೆಕಟ್ಟೆಗಳು ಉಕ್ಕಿ ಹರಿದಿವೆ. ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಜಲಾವೃತವಾಗಿದ್ದು, ಹಳ್ಳಿಗಳ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿವೆ. ಕಳೆದ ಕೆಲ ದಿನಗಳಿಂದ ವಿದ್ಯುತ್, ದೂರವಾಣಿ ಸಂಪರ್ಕ ಇಲ್ಲದೆ ಕತ್ತಲೆಯಲ್ಲಿ ಮುಳುಗಿದ್ದ ಗ್ರಾಮೀಣ ಭಾಗದ ಜನರಿಗೆ ಇದೀಗ ರಸ್ತೆ ಸಂಪರ್ಕ ಇಲ್ಲದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸಕಲೇಶಪುರ-ಬಿಸಿಲೆ-ಹಾನುಬಾಳು-ಯಸಳೂರು-ಕಾಡುಮನೆ, ವಣಗೂರು, ಚಂಗಡಿಹಳ್ಳಿ ಭಾಗದಲ್ಲಿ ಮಳೆಯ ರೌದ್ರ ನರ್ತನದಿಂದ ಜನ್ರು ಹೈರಾಣಾಗಿದ್ದಾರೆ. ದಿನ ಬಳಕೆ ವಸ್ತುಗಳನ್ನ ಕೊಳ್ಳಲು ಹೊರಹೋಗದ ಸ್ಥಿತಿಗೆ ತಲುಪಿದ್ದಾರೆ. ತಿಂಗಳುಗಳ ಕಾಲ ಮಾಡಿದ ಕೃಷಿ ಚಟುವಟಿಕೆ ನೀರಿನಲ್ಲಿ ಸಂಪೂರ್ಣ ಕೊಚ್ಚಿಹೋಗಿದ್ದು, ರೈತರು ಕಂಗಾಲಾಗಿದ್ದಾರೆ. ಕೋಟ್ಯಂತರ ರೂ. ಮೌಲ್ಯದ ಕಾಫಿ, ಅಡಕೆ, ಮೆಣಸು, ಶುಂಠಿ ಮತ್ತು ನಾಟಿ ಮಾಡಲಾಗಿದ್ದ ಭತ್ತ ನೀರುಪಾಲಾಗಿದೆ.
ಇನ್ನು ಪಟ್ಟಣದ ಆಜಾದ್ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಸಂತ್ರಸ್ತರನ್ನು ಪರಿಹಾರ ಕೇಂದ್ರಕ್ಕೆ ರವಾನಿಸಲಾಗಿದೆ. ಇನ್ನು ರಭಸವಾಗಿ ಬೀಸುತ್ತಿರುವ ಗಾಳಿಗೆ ನೂರಾರು ಮನೆಗಳ ಹೆಂಚುಗಳು, ಮೇಲ್ಛಾವಣಿ ಸೇರಿದಂತೆ, ಮನೆಯ ಗೃಹೋಪಯೋಗಿ ವಸ್ತುಗಳು ನೀರಿನಲ್ಲಿ ಮುಳುಗಿ ಮಧ್ಯಮ ವರ್ಗದ ಕುಟುಂಬಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪಟ್ಟಣದ ಹೊರವಲಯದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಸುಮಾರು 25 ಮನೆಯ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಬೆಂಗಳೂರು-ಮಂಗಳೂರು ನಡುವಿನ ಶಿರಾಡಿ ಘಾಟ್ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ರಸ್ತೆಯ ಎರಡೂ ಭಾಗದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪೊಲೀಸರಿಗೆ ಹರಸಾಹಸದ ಕೆಲಸವಾಗಿದೆ.