ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಮುಂದುವರೆದ ಮಳೆ, ಜನಜೀವನ ಅಸ್ತವ್ಯಸ್ತ - Benagluru -Mangaluru National High Way

ಹಾಸನ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯಿಂದ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಾಶಗೊಂಡಿದ್ದು. ಭೂಕುಸಿತ, ಪ್ರವಾಹ ಹಿನ್ನಲೆ ಮೂಲಭೂತ ಸೌಕರ್ಯ ದೊರಕದೆ ಜನ ಪರದಾಡುವಂತಾಗಿದೆ.

ಹಾಸನ: ಮುಂದುವರೆದ ವರುಣನ ಅಬ್ಬರ ಜನಜೀವನ ಅಸ್ತವ್ಯಸ್ತ

By

Published : Aug 11, 2019, 5:18 PM IST

Updated : Aug 11, 2019, 5:23 PM IST

ಹಾಸನ: ಜಿಲ್ಲೆಯ ಮಲೆನಾಡು ಪ್ರದೇಶವಾದ ಸಕಲೇಶಪುರ ತಾಲೂಕು ಸೇರಿದಂತೆ ವಿವಿಧೆಡೆ ವರುಣನ ಅಬ್ಬರ ಜೋರಾಗಿದ್ದು ಜನಜೀವನ ತೊಂದರೆಗೊಳಗಾಗಿದೆ.

ಪ್ರಮುಖ ನದಿ ಹೇಮಾವತಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ಮಾರ್ಗದಲ್ಲಿ ಶನಿವಾರ ಭೂ ಕುಸಿತ ಉಂಟಾದ ಪರಿಣಾಮ ಸಂಚಾರ ಸ್ಥಗಿತಗೊಂಡು 10 ಕಿ.ಮೀ.ಗೂ ಹೆಚ್ಚು ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪರಿಣಾಮ ಪ್ರಯಾಣಿಕರು ಸಂಚಾರ ಸಾಧ್ಯವಾಗದೆ ನೊಂದುಕೊಂಡರು. ಮಣ್ಣು ತೆರವುಗೊಳಿಸಿದ ಬಳಿಕ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಬಿರುಗಾಳಿ ಸಹಿತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಸಿಲೆ ಘಾಟಿ ಮಾರ್ಗದಲ್ಲಿ ಇಂದು ಬೆಳಗ್ಗೆ 7ರಿಂದ ನಾಳೆ ಬೆಳಗ್ಗೆ 7 ಗಂಟೆಯವರೆಗೆ ವಾಹನ ಸಂಚಾರ ಸಂಪೂರ್ಣ ನಿಷೇಧಿಸಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಆದೇಶಿಸಿದ್ದಾರೆ.

ಸಕಲೇಶಪುರ ತಾಲೂಕಿನ ಆನೆಮಹಲ್‌ನಲ್ಲಿ ನಿರಾಶ್ರಿತರಿಗೆ ತಾತ್ಕಾಲಿಕ ಪರಿಹಾರ ಕೇಂದ್ರ ತೆರೆಯಲಾಗಿದೆ.

ಅರಕಲಗೂಡು ತಾಲೂಕು ರಾಮನಾಥಪುರದಲ್ಲೂ ಮಳೆಯಿಂದಾಗಿ ರಸ್ತೆ ಹಾಗೂ ಬೆಳೆ ಹಾನಿಯಾಗಿದ್ದು, ಮನೆಯೊಂದರ ಗೋಡೆ ಕುಸಿದು ಬಿದ್ದಿದೆ. ವರುಣನ ಅಬ್ಬರಕ್ಕೆ ಪ್ರವಾಹ ಪರಿಸ್ಥಿತಿ ಮತ್ತಷ್ಟು ಏರಿಕೆಯಾಗಿದ್ದು, ಹೇಮಾವತಿ ನದಿ ಅಕ್ಕಪಕ್ಕದ ಹಳ್ಳಿಗಳು ಮತ್ತಷ್ಟು ಮುಳುಗಡೆಯಾಗಿವೆ. ಶನಿವಾರ ಬೆಳಗ್ಗೆಯಿಂದ ಮಳೆ ಹಾಗೂ ಗಾಳಿ ಪ್ರಮಾಣ ಒಂದಷ್ಟು ಕಡಿಮೆಯಾಗಿದ್ದರೂ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ.

ಶಿರಾಡಿ ಘಾಟಿ ರಸ್ತೆ ಕುಸಿದಿರುವುದು

ಜನ್ನಾಪುರ-ವಣಗೂಡು ರಾಜ್ಯ ಹೆದ್ದಾರಿಯ ಹಾನುಬಾಳು ಸಮೀಪದ ವೆಂಕಟಹಳ್ಳಿಯಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ದೇವಾಲದಕೆರೆ-ದೇವರುಂದ ರಸ್ತೆಗೆ ಮಣ್ಣು ಕುಸಿದು, ಮರಗಳು ತುಂಡಾಗಿ ಬಿದ್ದಿವೆ. ಪರಿಣಾಮ ಈ ಭಾಗದ ಎಲ್ಲಾ ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ಹೆಗ್ಗದ್ದೆ-ಕಾಡುಮನೆ ರಸ್ತೆಯಲ್ಲೂ ಮಣ್ಣು ಕುಸಿದು ಬಿದ್ದಿದ್ದು, ಹಾನುಬಾಳು, ಹೆತ್ತೂರು, ಯಸಳೂರು, ಕಸಬ ಹಾಗೂ ಬೆಳಗೋಡು ಹೋಬಳಿ ಭಾಗದ ಹಲವು ರಸ್ತೆಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟಿ ರಸ್ತೆಯಲ್ಲಿ ಮತ್ತೆ ಮಣ್ಣು ಕುಸಿದು ಬಿದ್ದಿದ್ದು, ಹೆದ್ದಾರಿ ಸಂಚಾರ ಬಂದ್ ಆಗಿದೆ. ಈ ಭಾಗದ ಎತ್ತಿನಹೊಳೆ, ದೊಡ್ಡತಪ್ಪಲೆ ಗ್ರಾಮಗಳಲ್ಲಿ ನಿರಂತರವಾಗಿ ಭೂ ಕುಸಿತವಾಗುತ್ತಿರುವ ಪರಿಣಾಮ ದೊಡ್ಡ ದೊಡ್ಡ ಬಂಡೆಗಳು, ಮರಗಳು ರಸ್ತೆ ಮೇಲೆ ಬಿದ್ದಿದ್ದು, ಕಳೆದ 24 ಗಂಟೆಯಿಂದಲೂ ಈ ರಸ್ತೆಯ(ಗುಂಡ್ಯ ಹಾಗೂ ಸಕಲೇಶಪುರ) ಎರಡೂ ಕಡೆಯಲ್ಲೂ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಇದರಿಂದಾಗಿ ಆನೆ ಮಹಲ್​​ನಿಂದ ಪಟ್ಟಣದವರೆಗೆ ಶುಕ್ರವಾರ ಸಂಜೆಯಿಂದಲೂ ಟ್ರಾಫಿಕ್ ಜಾಮ್ ಆಗುತ್ತಲೇ ಇದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಣ್ಣು ತೆರವು ಕಾರ್ಯ ಭರದಿಂದ ಸಾಗುತ್ತಿದ್ದು, ರಸ್ತೆ ಸಂಚಾರ ಇನ್ನೂ ತೊಡಕಾಗಬಹುದು ಎನ್ನಲಾಗಿದೆ.

ಮಂಗಳೂರು, ಧರ್ಮಸ್ಥಳ ಹಾಗೂ ಇತರೆ ಕರಾವಳಿ ಭಾಗಕ್ಕೆ ತೆರಳಬೇಕಾದವರು ಮತ್ತು ಸಕಲೇಶಪುರ, ಹಾಸನ, ಬೆಂಗಳೂರು ಮುಂತಾದೆಡೆಗೆ ಹೋಗಬೇಕಾದ ಪ್ರಯಾಣಿಕರು ಮಾರ್ಗ ಮಧ್ಯದಲ್ಲೇ ಸಿಲುಕಿಕೊಂಡಿದ್ದು, ಊಟ, ತಿಂಡಿಗೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ಹಾಗೂ ಇತರೆ ಬಾಡಿಗೆ ವಾಹನಗಳಲ್ಲಿ ಬಂದಿರುವ ಅನೇಕರು ತಮ್ಮ ತಮ್ಮ ಊರುಗಳಿಗೆ ವಾಪಾಸ್​ ಹಿಂತಿರುಗುತ್ತಿದ್ದಾರೆ. ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡಿರುವ ಕೆಲವು ಆಟೋ ಹಾಗೂ ಇತರೆ ಬಾಡಿಗೆ ವಾಹನದವರು ಮಾರ್ಗ ಮಧ್ಯೆ ಸಿಲುಕಿ ಕಂಗಾಲಾಗಿರುವ ಪ್ರವಾಸಿಗರಿಂದ ಸಾವಿರಾರು ರೂ. (ದುಪ್ಪಟ್ಟು) ಬಾಡಿಗೆ ಪಡೆದು ಪರ್ಯಾಯ ಮಾರ್ಗದ ಮೂಲಕ ಸುರಕ್ಷಿತ ಸ್ಥಳಗಳಿಗೆ ಬಿಡುವುದಾಗಿ ಬೇಡಿಕೆ ಇಡುತ್ತಿದ್ದಾರೆ ಎಂಬ ದೂರು ಪ್ರಯಾಣಿಕರಿಂದ ಕೇಳಿಬಂದಿದೆ.

ಜಿಲ್ಲೆಯ ಪ್ರಮುಖ ನದಿ ಹೇಮಾವತಿ ನೀರು ಹಿಂದೆಂದೂ ಕಂಡು ಕೇಳರಿಯದ ಮಟ್ಟಕ್ಕೆ ಏರಿಕೆಯಾಗಿರುವ ಪರಿಣಾಮ ಪಟ್ಟಣದ ಹೊಳೆ ಮಲ್ಲೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಗರ್ಭ ಗುಡಿ ಹಾಗೂ ದೇವಸ್ಥಾನ ಕಾಣದಷ್ಟು (ಮೇಲ್ಛಾವಣಿ) ಮಟ್ಟಕ್ಕೆ ನೀರು ತುಂಬಿದೆ. ಆಜಾದ್ ರಸ್ತೆಯ ಮತ್ತಷ್ಟು ಮನೆಗಳು, ನದಿ ಪಾತ್ರದ ಗ್ರಾಮಗಳಾದ ಹೆಬ್ಬಸಾಲೆ, ಹೆನ್ನಲಿ, ಮಳಲಿ ಗ್ರಾಮದಲ್ಲೂ ನೂರಾರು ಮನೆಗಳು ಜಲಾವೃತವಾಗಿವೆ. ಇಲ್ಲಿನ ಜನರನ್ನು ಸ್ಥಳಾಂತರಿಸುವ ಕಾರ್ಯ ಮುಂದುವರೆದಿದ್ದು, ಅಪಾಯ ಅರಿತು ಅನೇಕರು ನೆರೆಹೊರೆ ಹಾಗೂ ನೆಂಟರಿಷ್ಟರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಆನೆ ಮಹಲ್ ಗ್ರಾಮದ ಅಡ್ಡಾಣಿಗುಡ್ಡ ಮತ್ತಷ್ಟು ಕುಸಿಯುವ ಅಪಾಯದಲ್ಲಿದ್ದು, ಸುತ್ತಮುತ್ತಲ ನಿವಾಸಿಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ತಾಲೂಕಿನಾದ್ಯಂತ ಮತ್ತಷ್ಟು ಮರಗಳು ಧರಾಶಾಹಿಯಾಗಿದ್ದು, ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಜನರು ಕತ್ತಲೆಯಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿದೆ. ತೋಟ, ಗದ್ದೆಗಳಲ್ಲಿ ಮಣ್ಣು ಕಸಿದು ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಉಂಟಾದ ವರದಿಯಾಗಿದೆ. ಸುಮಾರು 4 ಸಾವಿರ ಎಕರೆಗೂ ಹೆಚ್ಚು ಭತ್ತದ ಗದ್ದೆ ಜಲಾವೃತವಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಗ್ರಾಮೀಣ ಭಾಗದ ಹೊಳೆ, ಹಳ್ಳಕೊಳ್ಳಗಳು ಇನ್ನೂ ಉಕ್ಕಿ ಹರಿಯುತ್ತಲೇ ಇದ್ದು, ಹಲವು ಸೇತುವೆಗಳು ಮುಳುಗಡೆಯಾಗಿವೆ.

ಸಕಲೇಶಪುರ ತಾಲೂಕಿನ ಗ್ರಾಮೀಣ ಭಾಗದ ಬಹುತೇಕ ಜನರು ವಿದ್ಯುತ್, ದೂರವಾಣಿ, ಮೊಬೈಲ್, ರಸ್ತೆ ಸಂಪರ್ಕ, ಕುಡಿಯುವ ನೀರು ಮುಂತಾದ ಮೂಲ ಸೌಕರ್ಯಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಹಾರ್ಲೆ ಎಸ್ಟೇಟ್ ಸಮೀಪ ಕಾಫಿ ತೋಟವೊಂದರಲ್ಲಿ ಮಳೆ ಹಾಗೂ ಗಾಳಿಗೆ ಮರವೊಂದು ಬುಡಮೇಲಾಗಿದ್ದು, ಮರದಡಿಯಲ್ಲಿ ಸಿಲುಕಿ ಕಾಡು ಹಂದಿಯೊಂದು ಸಾವನ್ನಪ್ಪಿದೆ.

ಶಾಸಕ ಪ್ರೀತಂ ಜೆ. ಗೌಡ ನೇತೃತ್ವದ ತಂಡ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸುತ್ತಿದ್ದು, ಮತ್ತೊಂದೆಡೆ ಜಿ.ಪಂ ಸದಸ್ಯ ಸುಪ್ರದೀಪ್ ಯಜಮಾನ್ ನೇತೃತ್ವದ ತಂಡ ಪರಿಶೀಲನೆಯಲ್ಲಿ ತೊಡಗಿದೆ.

Last Updated : Aug 11, 2019, 5:23 PM IST

ABOUT THE AUTHOR

...view details