ಹಾಸನ:ರೆಮ್ಡೆಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಸರ್ಕಾರ ಕೂಡಲೇ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ 2 ಸಾವಿರ ರೆಮ್ಡೆಸಿವಿರ್ ಇಂಜೆಕ್ಷನ್ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೆಮ್ಡೆಸಿವಿರ್ ಇಂಜೆಕ್ಷನ್ ಕೊರತೆಯಿತ್ತು. ನಾನೇ ಹೇಳಿ ಖಾಸಗಿಯವರಿಗೆ 480 ಇಂಜೆಕ್ಷನ್ ಕೊಡಿಸಿದ್ದೇನೆ. ಡ್ರಗ್ ಕಂಟ್ರೋಲರ್ ಫೋನ್ ರಿಸೀವ್ ಮಾಡ್ತಿಲ್ಲ. ಹಾಸನ ಜಿಲ್ಲೆಗೆ ತಕ್ಷಣ 2 ಸಾವಿರ ರೆಮ್ಡೆಸಿವಿರ್ ಇಂಜೆಕ್ಷನ್ ಕಳುಹಿಸಿ, ಉಚಿತವಾಗಿ ಕೊಡಬೇಕು. ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ.
ಜಿಲ್ಲೆಯಲ್ಲಿ ಹೇಳೋರು, ಕೇಳೋರು ಯಾರು ಇಲ್ಲ. ಸರ್ಕಾರ ಏನಾದ್ರು ಪಾಪರ್ ಬಿದ್ದಿದ್ದೀಯಾ?. ಸರ್ಕಾರ ಹಣವಿಲ್ಲ ಎಂದರೆ ಹೇಳಲಿ. ಆಗ ನಾವೇ ತಟ್ಟೆ ಹಿಡಿದು ಭಿಕ್ಷೆ ಬೇಡಿ ಚಿಕಿತ್ಸೆ ಸೋಂಕಿತರಿಗೆ ಕೊಡಿಸುತ್ತೇವೆ. ನಮ್ಮ ಕಾರ್ಯಕರ್ತರಿಗೂ ಭಿಕ್ಷೆ ಬೇಡಿ ಹಣ ಸಂಗ್ರಹಿಸುವಂತೆ ಹೇಳುತ್ತೇನೆ. ಸರ್ಕಾರ ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯಬಾರದು. ಬಡವರನ್ನು ನೋಯಿಸಬೇಡಿ, ನಿಮ್ಮ ಮಕ್ಕಳಿಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.