ಹಾಸನ: ಮಳೆಯಿಂದಾಗಿ ಆಗಿರುವ ನಷ್ಟದ ಪೂರ್ಣ ಪ್ರಮಾಣದ ನಷ್ಟದ ವರದಿ ಕೊಡಲು ಸಾಧ್ಯವಾಗಿಲ್ಲ. ಆದರೇ ಹಾಲಿ ಸಿದ್ದಪಡಿಸಿರುವ ವರದಿ ಮನೆಯಲ್ಲೇ ಕುಳಿತು ಸಿದ್ಧಪಡಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 2ಸಾವಿರ ಮನೆಗಳು ಕುಸಿದಿದ್ದು, ಅಧಿಕಾರಿಗಳು ನಿರ್ಲಕ್ಷ್ಯ ಮಾಡದೇ ಜನರ ಸಮಸ್ಯೆಗೆ ಸ್ಪಂದಿಸಬೇಕೆಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆಗ್ರಹಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಗಿರುವ ಅತಿವೃಷ್ಟಿ ಹಾನಿ ಸಂಬಂಧ ಜಿಲ್ಲಾಧಿಕಾರಿ ಅವರು ಕೂಡಲೇ ಎಲ್ಲಾ ಶಾಸಕರು, ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದು ಸರ್ಕಾರಕ್ಕೆ ವಸ್ತುಸ್ಥಿತಿ ಮನವರಿಕೆ ಮಾಡಬೇಕು. ಈಗಾಗಲೇ ಜಿಲ್ಲೆಯಲ್ಲಿ ಸುಮಾರು 450 ಕೋಟಿ ರೂ. ನಷ್ಟವಾಗಿದೆ ಎಂದು ಡಿಸಿ ಅವರೇ ಮಾಹಿತಿ ನೀಡಿದ್ದಾರೆ. ಆದರೆ ಅದಕ್ಕಿಂತ ಹೆಚ್ಚು ಅಂದರೆ ಅಂದಾಜು 650-700 ಕೋಟಿ ರೂ. ನಷ್ಟವಾಗಿದೆ. ಕಳೆದ 2 ತಿಂಗಳಿಂದ ಸತತ 30 ವರ್ಷದಲ್ಲೇ ಕಂಡರಿಯದ ಮಳೆಯಾಗಿದೆ ಎಂದರು.
ಈ ಸಂಬಂಧ ಡಿಸಿ ಅವರನ್ನು ಖುದ್ದು ಭೇಟಿಯಾಗಿ ಎಲ್ಲವನ್ನೂ ವಿವರಿಸಿದ್ದೇನೆ. ಸರ್ಕಾರವು 15 ಕೋಟಿ ರೂ. ಬಿಡುಗಡೆ ಮಾಡಿರುವುದು ಯಾವುದಕ್ಕೂ ಸಾಕಾಗುವುದಿಲ್ಲ. ಎಲ್ಲಾ ರೀತಿಯ ಶೇ.100 ರಷ್ಟು ಬೆಳೆಯಲ್ಲಿ ಶೇ. 75 ಭಾಗ ನಾಶವಾಗಿದೆ. ಕೊಟ್ಯಾಧಿಪತಿಗಳು ಎನಿಸಿಕೊಂಡಿದ್ದ ಕಾಫಿ ಬೆಳೆಗಾರರು ಈಗ ಆಲೂಗಡ್ಡೆ ಬೆಳೆಗಾರರ ಸ್ಥಿತಿ ಅನುಭವಿಸುತ್ತಿದ್ದಾರೆ. ಹಾಲಿ ಸಿದ್ಧಪಡಿಸಿರುವ ವರದಿ ಮನೆಯಲ್ಲೇ ತಯಾರಾಗಿದೆ ಎಂದು ರೇವಣ್ಣ ಗಂಭೀರ ಆರೋಪ ಮಾಡಿದರು.
ಜಿಲ್ಲೆಯಲ್ಲಿ 2 ಸಾವಿರ ಮನೆಗಳು ಕುಸಿದಿವೆ. ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು. ಅನೇಕ ಕಡೆ ಅಂಗನವಾಡಿ, ಶಾಲಾ ಕಟ್ಟಡಗಳು ಯಾವಾಗ ಬೇಕಾದ್ರೂ ಬೀಳಬಹುದು, ದುರಸ್ತಿಗಾಗಿ ಡಿಸಿ ಖಾತೆಗೆ ಕನಿಷ್ಠ 50 ಕೋಟಿ ಕೊಡಬೇಕು. ರಸ್ತೆ, ಕೆರೆ ಕಟ್ಟೆ ಹಾಳಾಗಿದ್ದು, ವಿಧಾನಸಭಾ ಕ್ಷೇತ್ರಕ್ಕೆ ತಲಾ 50 ಕೋಟಿ ನೀಡಬೇಕು. ಹಳ್ಳಿ ರಸ್ತೆ, ಅಂಗನವಾಡಿ ರಿಪೇರಿಗೆ ತಲಾ 5ಕೋಟಿ ಕೊಡಬೇಕು ಎಂದು ಒತ್ತಾಯಿಸಿದರು. ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್. ನಿಯಮಾವಳಿ ಬಿಟ್ಟು, ಸಂಕಷ್ಟದಲ್ಲಿರುವವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕರ ಪರ ಬ್ಯಾಟಿಂಗ್:ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರನ್ನು ರಾಗಿ ಕಳ್ಳ ಎಂದು ಹೇಳಿಕೆ ನೀಡಿರುವ ಬಿಜೆಪಿ ಎಮ್ಎಲ್ಸಿ ರವಿ ಕುಮಾರ್ಗೆ ನಾಚಿಕೆಯಾಗಬೇಕು. ಕ್ಷೇತ್ರದಲ್ಲಿ 50 ವರ್ಷದಿಂದ ಯಾರೂ ಮಾಡದ ಕೆಲಸವನ್ನು 15 ವರ್ಷದಲ್ಲಿ ಶಿವಲಿಂಗೇಗೌಡ ಮಾಡಿದ್ದಾರೆ. ಅವರ ಅಭಿವೃದ್ಧಿಯನ್ನು ಸಹಿಸಲಾರದೇ ಹೊಟ್ಟೆ ಉರಿಯಿಂದ ಪ್ರತಿಭಟನೆ ಹಾದಿ ಹಿಡಿದಿದ್ದಾರೆ ಎಂದು ರೇವಣ್ಣ ವಾಗ್ದಾಳಿ ನಡೆಸಿದರು.
ರಾಗಿ ಮಾರಾಟ ಅಥವಾ ಖರೀದಿ ಹಣ ಶಾಸಕರ ಅಕೌಂಟ್ಗೆ ಬರುತ್ತದೆಯೇ ಎಂಬ ಕನಿಷ್ಠ ಜ್ಞಾನ ಹೋರಾಟ ಮಾಡುವವರಿಗೆ ಇಲ್ಲ. ಬಿಜೆಪಿ ಅವರಿಗೆ ಅಭಿವೃದ್ಧಿ ಬೇಕಿಲ್ಲ. ಪರ್ಸೆಂಟೇಜ್ ಹೊಡೆಯುವುದು ಅವರ ಉದ್ದೇಶವಾಗಿದೆ ಎಂದು ಕಿಡಿಕಾರಿದರು. ದೇವೇಗೌಡರ ಹೋರಾಟದಿಂದ ರಾಜ್ಯದಲ್ಲಿ ಎರಡು ಬಾರಿ ರಾಗಿ ಖರೀದಿಗೆ ಅವಕಾಶ ಸಿಕ್ಕಿತು. ಶಿವಲಿಂಗೇಗೌಡರು ಯಾವ ಪಕ್ಷಕ್ಕೂ ಹೋಗುವುದಿಲ್ಲ. ಹಾಸನ ಜಿಲ್ಲೆಯ 6 ಜನ ಶಾಸಕರು ಒಟ್ಟಾಗಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದರು.
ಇದನ್ನೂ ಓದಿ:ನಮ್ಮ ಸಿಎಂ ಬೊಮ್ಮಾಯಿ, ತಾಕತ್ತಿದ್ದರೆ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಪ್ರಕಟಿಸಿ: ಕಾಂಗ್ರೆಸ್ಗೆ ಅಶೋಕ್ ನೇರ ಸವಾಲು..!