ಹಾಸನ: ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಆಡಳಿತದಲ್ಲಿ 10% ಪರ್ಸೆಂಟೇಜ್ ಸರ್ಕಾರ ಎಂದು ಕರೆದಿದ್ದವರು, ಇದೀಗ ಬಿಜೆಪಿ ಆಡಳಿತದಲ್ಲಿ 25% ಪರ್ಸೆಟೇಜ್ ಆಗಿದ್ದು, ಬೇಕಾದರೇ ದಾಖಲೆ ಕೊಡಿಸುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಾಗ್ದಾಳಿ ನಡೆಸಿದರು.
ರಾಜ್ಯ-ಕೇಂದ್ರದ ವಿರುದ್ಧ ರೇವಣ್ಣ ವಾಗ್ದಾಳಿ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿರವರು ರಾಜ್ಯದಲ್ಲಿ ನಮ್ಮ ಸರ್ಕಾರವನ್ನು 10% ಪರ್ಸೆಂಟೇಜ್ ಸರ್ಕಾರ ಅಂತ ಕರೆದಿದ್ದರು. ಇವತ್ತು ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಗುತ್ತಿಗೆದಾರರ ಬಳಿ ಶೇ. 25ರಷ್ಟು ಹಣ ವಸೂಲಿ ಮಾಡುತ್ತಿದೆ. ಸಣ್ಣ ಪುಟ್ಟ ಗುತ್ತಿಗೆದಾರರು ಹೆಂಡತಿ-ಮಕ್ಕಳ ಚಿನ್ನಾಭರಣ ಅಡವಿಟ್ಟು ಬೀದಿಗೆ ಬಂದಿದ್ದಾರೆ.
ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ
ನನ್ನ ರಾಜಕೀಯ ಜೀವನದಲ್ಲಿ ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ. ಅರಕಲಗೂಡು ಶಾಸಕ ರಾಮಸ್ವಾಮಿ ಭ್ರಷ್ಟಾಚಾರದ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದಾರೆ. ಇದು ವಿಧಾನಸಭೆ ರೆಕಾರ್ಡ್ನಲ್ಲಿದೆ. ಮುಖ್ಯಮಂತ್ರಿ ಇದನ್ನು ತಡೆಯಬೇಕು. ಇದೊಂದು ಡಬಲ್ ಇಂಜಿನ್ ಸರ್ಕಾರ ಆಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿನ ಇಂಜಿನ್ ಖಾಲಿ ಇದ್ದು, ಎರಡಕ್ಕೂ ಡಿಸೇಲ್ ತುಂಬಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪಂಚ ರಾಜ್ಯ ಚುನಾವಣೆಗೆ ಬಿಜೆಪಿ ಹಣ ಸಂಗ್ರಹ
ಐದು ರಾಜ್ಯಗಳ ಚುನಾವಣೆಗೆ ಬಿಜೆಪಿ ಹಣ ಸಂಗ್ರಹ ಮಾಡುತ್ತಿದ್ದೆ. ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಬುಸ್ತೆನಹಳ್ಳಿ ಬಳಿ 30 ಎಕರೆ ಜಾಗದಲ್ಲಿ ರಸ್ತೆ ಬಿಡದಿದ್ರೂ, ಲೇ ಔಟ್ ಮಾಡಲು ಅನುಮತಿ ನೀಡಿದ್ದಾರೆ. ಒಳಚರಂಡಿ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹೀಗೆ ಮುಂದುವರೆದರೆ ಜಿಲ್ಲೆಯ ಇಲಾಖೆಯ ಕೆಲ ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ ಎಂದು ಎಚ್ಚರಿಸಿದರು. ಹಾಸನದ ಸುತ್ತ-ಮುತ್ತ ಲೂಟಿಕೋರರ ಕೈ ಸೇರಿದ್ದು, ಲೇಔಟ್ ಮಾಡುವರ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ. ನಾವು ಅಧಿಕಾರದಲ್ಲಿರುವವರೆಗೂ ಇವರು ನಾಯಿಮರಿ ಆಗಿದ್ದರು. ಈಗ ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದು ನಿಮ್ಮ ಮಕ್ಕಳು ಮರಿಗೆ ಒಳ್ಳೆಯದಾಗಲ್ಲ. ನಿಯಮಗಳನ್ನು ಗಾಳಿಗೆ ತೂರಿ ಸೈಟ್ ನೊಂದಣಿ ಮಾಡಿಸಲಾಗುತ್ತಿದೆ. ಸಹಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾದರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ರು.
ಕಾಟಿಹಳ್ಳಿ. ಸತ್ಯಮಂಗಲ. ಹರಳಹಳ್ಳಿ ತೇಜೂರು ಪಿಡಿಒಗಳು ಕೆಲವರ ಜೊತೆ ಶಾಮಿಲಾಗಿ ಮನೆ ನಿರ್ಮಾಣ ಮಾಡಲು ಅವಕಾಶ ನೀಡಿ ಕಾನೂನು ಬಾಹಿರ ಕೆಲಸ ಮಾಡುತ್ತಿದ್ದಾರೆ. ಮುಂದೆ ಈ ಬಗ್ಗೆ ಆರ್ಟಿಎಯಲ್ಲಿ ದಾಖಲೆ ಪಡೆದು ಮಟ್ಟ ಹಾಕುವುದೇ ನನ್ನ ಕೆಲಸ ಎಂದು ಶಾಕ್ ನೀಡಿದರು.
ಹೆಚ್.ಡಿ. ಕುಮಾರಸ್ವಾಮಿ ಕಾಲದ ಕಾಮಗಾರಿಗಳನ್ನು ಮಂಜೂರು ಮಾಡುವಂತೆ ಜೆಡಿಎಸ್ ಶಾಸಕರು ವಿಧಾನಸಭೆಯಲ್ಲಿ ಧರಣಿ ಮಾಡಿದ್ದೆವು. ಹಾಸನ ವಿಮಾನ ನಿಲ್ದಾಣ, ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಂತೆ ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು ಎಂದ್ರು. ಅರಣ್ಯ ಇಲಾಖೆ, ಹರ್ಬನ್, ಕೆಇಬಿ ಹೈಟೆಂಕ್ಷನ್ ಅಧಿಕಾರಿಗಳು ಹುಡಾ ಅಧಿಕಾರಿಗಳೊಂದಿಗೆ ಶಾಮಿಲಾಗಿ ದಂಧೆ ನಡೆಸುತ್ತಿದ್ದಾರೆ ಎಂದರು.