ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಸನ:ಈ ಜಿಲ್ಲೆಗೆ ಕಾಂಗ್ರೆಸ್ನವರ ಕೊಡುಗೆ ಏನು?, ಹೆಚ್.ಡಿ.ದೇವೇಗೌಡರನ್ನು ಸೋಲಿಸಿದ್ದೇ ಕಾಂಗ್ರೆಸ್ನವರ ಸಾಧನೆ. ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇಲ್ಲ, ದೇಶದಲ್ಲೇ ಮುಳುಗುತ್ತಿರುವ ಹಡಗಿನಂತಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಟೀಕಿಸಿದರು.
ಹಾಸನದಲ್ಲಿ ಬುಧವಾರ ಮಾತನಾಡಿದ ಅವರು, 2024ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾವೇರಿ ನೀರಾವರಿ ಯೋಜನೆಗೆ ಒಳಪಡುವ ರೈತರನ್ನು ತಮಿಳುನಾಡಿಗೆ ಅಡವಿಡುತ್ತಿದ್ದಾರೆ. ದಯಮಾಡಿ ನಮ್ಮ ರೈತರನ್ನು ಉಳಿಸಿ ಎಂದರು.
ಜಿಲ್ಲೆಗೆ ಇಲ್ಲಿನ ಸಂಸದರ ಕೊಡುಗೆ ಏನು ಎಂಬುದನ್ನು ಸಮಯ ಬಂದಾಗ ಹೇಳುತ್ತೇನೆ. ಹಾಸನದಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತಿದ್ದ ಕಾರಣ ಅದಕ್ಕೆ ಮೇಲ್ಸೇತುವೆ ಮಾಡಿಸಿದವರು ಯಾರು ಎಂದು ಕಾಂಗ್ರೆಸ್‌ನವರಿಗೆ ಗೊತ್ತಿದೆಯಾ?, ಹಾಸನ ಜಿಲ್ಲೆಯಲ್ಲಿ ಆಸ್ಪತ್ರೆ ಕಟ್ಟಡ ಕಟ್ಟಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರೇ ಬರಬೇಕಿತ್ತಾ?, ಬಡವರ ಮಕ್ಕಳು ಓದಲಿಕ್ಕೆ ಅಂತ ಶಾಲಾ ಕಟ್ಟಡ ಕಟ್ಟಿದ್ರಲ್ಲ, ಅದಕ್ಕೂ ಕುಮಾರಣ್ಣನೇ ಬರಬೇಕು. ಹಾಗಿದ್ದರೆ, ಕಾಂಗ್ರೆಸ್ ಕೊಡುಗೆ ಏನು? ಎಂದು ಆಕ್ರೋಶ ಹೊರಹಾಕಿದರು.
ದೇವೇಗೌಡರು ಪ್ರಧಾನಿಯಾಗದಿದ್ದರೆ ಹಾಸನದಲ್ಲಿ ರೈಲ್ವೆ ಮಾರ್ಗ ನಿರ್ಮಾಣವಾಗುತ್ತಿತ್ತಾ?, ಇವತ್ತು ಎಷ್ಟು ರೈಲು ಜಿಲ್ಲೆಯಿಂದ ಓಡಾಡುತ್ತಿವೆ ಎಂಬುದು ಕಾಂಗ್ರೆಸ್ ಅವರಿಗೆ ಗೊತ್ತಿದೆಯಾ?, ಹಾಸನದ ಮೇಲ್ಸೇತುವೆ ಮತ್ತು ಹೊಳೆನರಸೀಪುರದ ಹಂಗರಹಳ್ಳಿ ಮೇಲ್ಸೇತುವೆಗೆ ಹಣ ಕೊಡಲು ಕಾಂಗ್ರೆಸ್ ಪಕ್ಷಕ್ಕೆ ಆಗ್ತಿಲ್ಲ, ರಾಜ್ಯದಲ್ಲಿ ಬರ ಇದೆ ಎನ್ನುತ್ತಾರೆ, ಸಂಸದರು ಕೇಂದ್ರಕ್ಕೆ ಮನವಿ ಮಾಡಿ 10 ಕೋಟಿ ಕೊಡ್ಸಿಲ್ವಾ?. ಸಂಸದರು ಕೆಲಸ ಮಾಡಿಲ್ಲ ಅಂದ್ರೆ ಇದೇನು ಕೆಲಸ ಅಲ್ವಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ರಾಮನಗರಕ್ಕೆ ಕುಮಾರಸ್ವಾಮಿ ಏನೇನ್ ಮಾಡಿದ್ದಾರೆ ಅಂತ ದಾಖಲೆ ತೆಗೆದು ನೋಡಿದ್ರೆ ಗೊತ್ತಾಗುತ್ತೆ: ಎಚ್.ಡಿ.ರೇವಣ್ಣ
ದೇವೇಗೌಡರನ್ನು ತುಮಕೂರಿನಲ್ಲಿ, ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದಲ್ಲಿ ನಿಲ್ಲಿಸಿ ಕತ್ತು ಕೊಯ್ದಿದ್ದು ಕಾಂಗ್ರೆಸ್ ಪಕ್ಷದವರೇ ತಾನೆ?. 14 ತಿಂಗಳು ಕುಮಾರಸ್ವಾಮಿ ಮತ್ತು ದೇವೇಗೌಡರ ಋಣದಲ್ಲಿ ಕಾಂಗ್ರೆಸ್ ಇತ್ತು. ಹೆಚ್ಡಿಕೆ ಮನೆಗೆ ಬಂದು ಸರ್ಕಾರ ರಚನೆ ಮಾಡಲು ನಿಮ್ಮ ಸಹಾಯ ಬೇಕು ಅಂತ ಕೇಳಿ ಮಜಾ ಮಾಡಿದ್ರಲ್ಲ, ಇವತ್ತು ಕಾಂಗ್ರೆಸ್ಸಿಗೆ ನೈತಿಕತೆ ಇದೆಯಾ? ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ, ನನಗೆ ಯಾವ ನೋಟಿಸ್ ಕೂಡ ಬಂದಿಲ್ಲ, ಅಕಸ್ಮಾತ್ ಬಂದಿದ್ರೆ ಎಲೆಕ್ಷನ್ ಅವರು ಕಳಿಸಿರುತ್ತಾರೆ ಬಿಡಿ ಎಂದರು.