ಕರ್ನಾಟಕ

karnataka

ಯಾರು ಏನೇ ಹೇಳಿದ್ರು ಟಿಕೆಟ್​ ಕೊಡೋದು ಹೆಚ್​ಡಿಕೆ ನೇತೃತ್ವದಲ್ಲೇ.. ತಮ್ಮನ ಪರ ರೇವಣ್ಣ ಬ್ಯಾಟಿಂಗ್​

By

Published : Jan 29, 2023, 3:04 PM IST

ಹೆಚ್​ ಡಿ ಕುಮಾರಸ್ವಾಮಿ ಮತ್ತು ಪಕ್ಷದ ಅಧ್ಯಕ್ಷರ ಅಭಿಪ್ರಾಯದ ನಂತರ ಟಿಕೆಟ್​ ಘೋಷಣೆ- ಹೆಚ್​ ಡಿ ರೇವಣ್ಣ ಹೇಳಿಕೆ- ಪುತ್ರ ಸೂರಜ್​ ಹೇಳಿಕೆಗೆ ಆಕ್ಷೇಪ

HD Revanna
ಹೆಚ್​.ಡಿ ರೇವಣ್ಣ

ಹಾಸನ ಟಿಕೆಟ್​ ವಿಚಾರ ಕುರಿತು ಹೆಚ್​.ಡಿ ರೇವಣ್ಣ ಪ್ರತಿಕ್ರಿಯೆ..

ಹೊಳೆನರಸೀಪುರ(ಹಾಸನ): ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್​.ಡಿ ಕುಮಾರಸ್ವಾಮಿ ಹಾಗೂ ಪಕ್ಷದ ಅಧ್ಯಕ್ಷರು ಮತ್ತು ಪ್ರಮುಖರ ಅಭಿಪ್ರಾಯ ತೆಗೆದುಕೊಂಡು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಜಿ ಸಚಿವ ಹೆಚ್​.ಡಿ ರೇವಣ್ಣ ಸ್ಪಷ್ಟಪಡಿಸಿದ್ದಾರೆ.

ತಮ್ಮನ ಪರ ಬ್ಯಾಟಿಂಗ್​:ಈ ಕುರಿತು ಇಂದುಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರು ಏನೇ ಹೇಳಬಹುದು. ಆದರೆ ಟಿಕೆಟ್ ಕೊಡೋದು ಕುಮಾರಸ್ವಾಮಿ ನೇತೃತ್ವದಲ್ಲಿ. ಕೆಲವು ಕಾರ್ಯಕರ್ತರು ಭವಾನಿ ರೇವಣ್ಣಗೆ ಕೊಡಬೇಕು ಅಂತಾ ಕೇಳುತ್ತಾರೆ. ಇನ್ನೂ ಕೆಲವರು ಸ್ಥಳೀಯರಿಗೆ ಕೊಡಬೇಕು ಅಂತಾರೆ. ಅದು ತಪ್ಪು ಅಂತ ನಾನು ಹೇಳುವುದಿಲ್ಲ. ಆದರೆ ಟಿಕೆಟ್ ಕೊಡೋದು ಕುಮಾರಸ್ವಾಮಿ ಮತ್ತು ದೇವೇಗೌಡರು. ಅವರನ್ನು ಬಿಟ್ಟು ಪಕ್ಷದಲ್ಲಿ ಏನು ನಡೆಯುವುದಿಲ್ಲ ಎಂದು ತಮ್ಮನ ಪರ ಬ್ಯಾಟ್​ ಬೀಸಿದರು.

ಪುತ್ರನಿಗೆ ಪರೋಕ್ಷವಾಗಿ ಟಾಂಗ್​: ಟಿಕೆಟ್ ಕೊಡುವ ವಿಚಾರದಲ್ಲಿ ಜಿಲ್ಲೆಯಲ್ಲಿ ನಾನೇ ಅಂತಿಮ ಅಲ್ಲ. ಎಲ್ಲರೂ ಕುಳಿತು ಚರ್ಚೆ ಮಾಡಿ ನಂತರ ಟಿಕೆಟ್ ಕೊಡುತ್ತೇವೆ. ಅದನ್ನು ಬಿಟ್ಟು ಕುಮಾರಸ್ವಾಮಿ ಅವರನ್ನ ಹೊರತುಪಡಿಸಿ ಟಿಕೆಟ್ ಕೊಡುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಪುತ್ರ ಸೂರಜ್ ರೇವಣ್ಣಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ವರಿಷ್ಠರ ನಿರ್ಧಾರ: ಇನ್ನು ಕುಮಾರಸ್ವಾಮಿ ಮತ್ತು ರೇವಣ್ಣ ಅವರನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಅದೇನಾದರೂ ಅವರು ಪ್ರಯತ್ನ ಪಡುತ್ತಿದ್ದರೆ ಅದು ಭ್ರಮನಿರಸನ ಅಷ್ಟೇ. ಇದನ್ನ ಕ್ಲಿಯರ್ ಕಟ್ಟಾಗಿ ನಾನು ಹೇಳುತ್ತಿದ್ದೇನೆ. ಆದರೆ ನಾನು ನನ್ನ ಜಿಲ್ಲೆ ಅಭಿವೃದ್ದಿಗೋಸ್ಕರ ಶ್ರಮಿಸುತ್ತಿದ್ದೇನೆ. ಕುಮಾರಸ್ವಾಮಿ ಬರದಿದ್ದರೆ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಹಲವು ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗುತ್ತಿದ್ದವಾ?, ಹಾಗಾಗಿ ಟಿಕೆಟ್ ಇಂಥವರಿಗೆ ಕೊಡಬೇಕು ಅಂತ ಕಾರ್ಯಕರ್ತರು ಕೇಳುವುದು ತಪ್ಪು ಎನ್ನುವುದಿಲ್ಲ. ಆದರೆ ಯಾರಿಗೆ ಟಿಕೆಟ್ ಕೊಡಬೇಕು ಎಂಬುದು ವರಿಷ್ಠರ ನಿರ್ಧಾರ. ನಾನೊಬ್ಬನೇ ಇಲ್ಲಿ ನಿರ್ಧರಿಸುವುದಿಲ್ಲ ಎಂದು ಹೆಚ್​ ಡಿ ರೇವಣ್ಣ ಹೇಳಿದರು.

ಪರೋಕ್ಷ ಬೆಂಬಲ ನೀಡಿದ್ದ ಸೂರಜ್:ಭವಾನಿ ರೇವಣ್ಣಗೆ ಕೊಡಿ ಅಂತ ನಾನು ಹೇಳುತ್ತಿಲ್ಲ. ಜೆಡಿಎಸ್​​ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ನಮ್ಮ ಕುಟುಂಬದವರಲ್ಲೇ ಯಾರಿಗಾದರೂ ಒಬ್ಬರಿಗೆ ಟಿಕೆಟ್​ ನೀಡಿದರೆ ಪಕ್ಷವನ್ನು ಸುಲಭವಾಗಿ ಅಧಿಕಾರಕ್ಕೆ ತರಬಹುದು ಎಂಬುದು ನನ್ನ ಭಾವನೆ. ಈ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಪರೋಕ್ಷವಾಗಿ ತಾಯಿ ಭವಾನಿ ರೇವಣ್ಣಗೆ ಟಿಕೆಟ್ ನೀಡಬೇಕು ಎಂದು ನಿನ್ನೆ(ಶನಿವಾರ) ವಿಧಾನಪರಿಷತ್​ ಸದಸ್ಯ ಸೂರಜ್​ ರೇವಣ್ಣ ಹೇಳಿದ್ದರು.

ಹಾಸನದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ್ದ ಅವರು, ಹಾಸನ ಜಿಲ್ಲೆಯು ಜೆಡಿಎಸ್ ಭದ್ರಕೋಟೆಯಾಗಿದೆ. ಆದರೆ, ಕಳೆದ ಬಾರಿ ನಮ್ಮ ಅಸ್ತಿತ್ವ ಕಳೆದುಕೊಂಡಿದ್ದೇವೆ. ಈ ಬಾರಿಯಾದರೂ ನಾವು ಅದನ್ನು ವಾಪಸ್ ಪಡೆಯಬೇಕು. ಕ್ಷೇತ್ರದಲ್ಲಿ ಟಿಕೆಟ್​ ಗೊಂದಲಗಳು ಇರುವುದು ಸಹಜ. ಆದರೆ, ಟಿಕೆಟ್​ಗಾಗಿ ಜನರು ನಡೆಸುತ್ತಿರುವುದು ಪ್ರತಿಭಟನೆ ಅಲ್ಲ, ಇದೊಂದು ಒತ್ತಾಯ ಮಾತ್ರ ಎಂದು ಸೂರಜ್ ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ:ಹಾಸನ: ಭವಾನಿ ರೇವಣ್ಣಗೆ ಟಿಕೆಟ್​ ನೀಡುವಂತೆ ಸೂರಜ್​ ಮತ್ತು ಪ್ರಜ್ವಲ್​ ರೇವಣ್ಣ ಪರೋಕ್ಷ ಬೆಂಬಲ

ABOUT THE AUTHOR

...view details