ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಾಸನ:ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ವಿನಾಕಾರಣ ತಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎ.ಟಿ.ರಾಮಸ್ವಾಮಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದರು.
"ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಮಸ್ವಾಮಿ, ದಾಖಲೆರಹಿತ ಆರೋಪ ಮಾಡುತ್ತಿರುವುದು ದುರದೃಷ್ಟಕರ. ನಾನು ಜಿಲ್ಲೆಯಲ್ಲಿ ಬೇನಾಮಿ ಆಸ್ತಿ ಮಾಡಿದ್ದರೆ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ. ಯಾವುದೇ ರೀತಿಯ ತನಿಖೆಗೂ ನಾನು ಸಿದ್ಧ" ಎಂದರು.
"ಸತ್ಯವಿಲ್ಲದ ವಿಚಾರವನ್ನು ರಾಜಕೀಯಗೊಳಿಸಬಾರದು. ಇದೀಗ ಆ ಕೆಲಸವಾಗುತ್ತಿದೆ. ಲೋಕಸಭಾ ಚುನಾವಣೆ ಬರುತ್ತಿರುವುದರಿಂದ ವರ್ಷದ ಹಿಂದಿನ ವಿಚಾರ ಇಟ್ಟುಕೊಂಡು ಇದೀಗ ರಾಜಕೀಯ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಅನ್ಯಾಯಕ್ಕೊಳಗಾದ ಮಹಿಳೆ ಹೆಸರಿನಲ್ಲಿ ಹಾಸನ ಕ್ಷೇತ್ರದಿಂದ ಪಕ್ಷವೊಂದರ ಟಿಕೆಟ್ ಪಡೆಯುವ ಪ್ರಯತ್ನ ಮಾಡುತ್ತಿರುವ ಅವರು, ನಮ್ಮ ಕುಟುಂಬದ ಮೇಲೆ ಹೀಗೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಅಂತಹ ಆರೋಪವೇನಾದರೂ ಇದ್ದರೆ ತನಿಖೆ ಆಗಲಿ" ಎಂದು ರೇವಣ್ಣ ಸವಾಲೆಸದರು.
"ದೇವೇಗೌಡರ ಕುಟುಂಬ ಎಲ್ಲ ರೀತಿಯ ತನಿಖೆಗಳನ್ನೂ ಎದುರಿಸಿದೆ. ಅಂದು ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ನ ಹಲವು ನಾಯಕರಿದ್ದ ಬಗ್ಗೆ ತಿಳಿದುಕೊಂಡಿದ್ದೇನೆ. ಇಂತಹ ಹೋರಾಟ ಆ ಮನುಷ್ಯನಿಗೆ ಶೋಭೆ ತರಲ್ಲ. ಈ ಜಿಲ್ಲೆಯಲ್ಲಿ ನಾನು ಯಾರ ಮೇಲೆ ದೌರ್ಜನ್ಯ ಮಾಡಿದ್ದೇನೆ? ಯಾವ ಆಸ್ತಿ ಹೊಡೆಸಿದ್ದೇನೆ ಎಂಬುದನ್ನು ತಿಳಿಸಲಿ. ಮಾಧ್ಯಮದಲ್ಲಿ ಬಂದಿದ್ದನ್ನು ನೋಡಿ ಅವರನ್ನು ಕರೆಯಿಸಿಕೊಂಡೆ ಎನ್ನುತ್ತಿದ್ದಾರೆ. ಆದರೆ, ಪ್ರತಿಭಟನೆಗೆ ಹೇಗೆ ಕರೆದುಕೊಂಡು ಬಂದರು, ಹೇಗೆ ಪೇಮೆಂಟ್ ಆಯ್ತು ಎಂಬ ಬಗ್ಗೆ ಎಲ್ಲವೂ ಗೊತ್ತಿದೆ. ಇದೇ ರೀತಿ ಮುಂದುವರೆದರೆ ಕಾನೂನು ಹೋರಾಟ ಮಾಡುವೆ" ಎಂದು ಎಚ್ಚರಿಕೆ ನೀಡಿದರು.
ಪ್ರಧಾನಿ ಮೋದಿ ಮತ್ತು ರಾಮಮಂದಿರ ಉದ್ಘಾಟನೆ ಕುರಿತು ಪ್ರತಿಕ್ರಿಯಿಸಿ, "ನಮಗೆ ಮೋದಿ ಅವರ ಬಗ್ಗೆ ಅಪಾರ ಗೌರವ ಇದೆ. ದೇಶಕ್ಕೆ ಈಗ ಮೋದಿಯವರ ಅಧಿಕಾರದ ಅವಶ್ಯಕತೆ ಇದೆ. ಕಾಂಗ್ರೆಸ್ ನಾಯಕರು ರಾಮಮಂದಿರ ಉದ್ಘಾಟನೆಗೆ ಹೋಗಲ್ಲ ಎಂದಿದ್ದಾರೆ. ತಮ್ಮ ಓಟ್ ಬ್ಯಾಂಕ್ ಉಳಿಸಿಕೊಳ್ಳಲು ಹೀಗೆ ಮಾಡಿರಬಹುದು" ಎಂದರು.
"ಈ ರಾಜ್ಯದಲ್ಲಿ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ನಾಯಕ ದೇವೇಗೌಡರು. ನಾವು ಬಿಜೆಪಿ ಜೊತೆ ಮೈತ್ರಿ ಇದ್ದರೂ ಕೂಡ ಯಾವುದೇ ಸಮುದಾಯವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ರಾಮಸ್ವಾಮಿ ಅವರು ಕಾಂಗ್ರೆಸ್ ಸೇರುವ ಪ್ರಯತ್ನ ಮಾಡಿದರು. ಆ ನಂತರ ಏನೇನಾಯಿತು ಎಂದು ನಿಮಗೇ ಗೊತ್ತಿದೆ. ಅವರು ಸತ್ಯ ತಿಳಿಯದೇ ಹೀಗೆ ಆರೋಪ ಮಾಡಿದ್ದರೆ, ಅವರಿಗೆ ದೇವರು ಒಳ್ಳೆಯದು ಮಾಡಲಿ. ಈಗ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಈಗ ಹೋರಾಟ ಮಾಡುವ ಬದಲು ವರ್ಷದ ಹಿಂದೆಯೇ ಮಾಡಬೇಕಿತ್ತು. ದೇವೇಗೌಡರ ಕುಟುಂಬವನ್ನು ಬೈದರೆ ಅಧಿಕಾರ ಸಿಗುತ್ತೆ ಎಂದು ಹೀಗೆ ಮಾಡುತ್ತಿದ್ದಾರೆ" ಎಂದು ರೇವಣ್ಣ ಆಕ್ರೋಶ ಹೊರಹಾಕಿದರು.
"ರಾಮಮಂದಿರ ಅನ್ನೋದು ಭಾರತದ ಕೋಟ್ಯಂತರ ಮಂದಿಯ ಭಾವನಾತ್ಮಕ ಸಂಬಂಧ. ಅದರಲ್ಲಿ ರಾಜಕಾರಣ ಮಾಡುತ್ತೇವೆ ಅನ್ನುವುದಾದರೆ ಅದರಂತಹ ಮೂರ್ಖತನ ಇನ್ನೊಂದಿಲ್ಲ" ಎಂದು ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ರಾಮ ಮಂದಿರ ಉದ್ಘಾಟನೆಗೆ ಎಲ್ಲ ಸಂಸದರಿಗೂ ಆಹ್ವಾನ ಕೊಟ್ಟಿದ್ದಾರೆ. ವಿಶೇಷವಾಗಿ ಮಾಜಿ ಪ್ರಧಾನಿ ದೇವೇಗೌಡರಿಗೂ ಮೋದಿ ಖುದ್ದಾಗಿ ಆಹ್ವಾನ ಕೊಟ್ಟಿದ್ದಾರೆ. ನಾನಂತೂ ಖಂಡಿತ ಹೋಗುವೆ. ಕಾಂಗ್ರೆಸ್ ನಿರ್ಣಯ ಅವರ ಪಕ್ಷಕ್ಕೆ ಬಿಟ್ಟದ್ದು. ಅವರ ನಿರ್ಣಯ ಯಾವ ರೀತಿ ಇಂಪ್ಯಾಕ್ಟ್ ಆಗುತ್ತೆ ಅಂತ 2024ರ ಚುನಾವಣೆಯಲ್ಲಿ ನೋಡಬೇಕು" ಎಂದರು.
ಮಂತ್ರಾಕ್ಷತೆ ಬಗ್ಗೆ ಡಿಸಿಎಂ ಹೇಳಿಕೆ ವಿಚಾರವಾಗಿ ಉತ್ತರಿಸಿ, "ಅದು ಅವರವರ ಅನಿಸಿಕೆ. ರಾಮಮಂದಿರ ನಿರ್ಮಾಣಕ್ಕೆ ನಾನು ಸಹಕಾರ ಕೊಡುವೆ ಅಂತ ಅವರೇ ಹೇಳಿದ್ದರು. ಕೇಂದ್ರದ ಕಾಂಗ್ರೆಸ್ ಬೇರೆ ರೀತಿ ಹೇಳುತ್ತಿದೆ, ರಾಜ್ಯ ಕಾಂಗ್ರೆಸ್ ಬೇರೆ ರೀತಿ ಹೇಳುತ್ತಿದೆ. ಎರಡು ತಪ್ಪು ಮಾಹಿತಿ ನೀಡುತ್ತಿದೆ" ಎಂದು ಬೇಸರ ಹೊರಹಾಕಿದರು.
ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ವಿಚಾರವಾಗಿ, "ನಾನು ಅದಕ್ಕೆ ಪ್ರತಿಕ್ರಿಯೆ ಕೊಡಲು ಹೋಗಲ್ಲ. ಕೋರ್ಟ್‌ಗೆ ಕೇಸ್ ಹಾಕೊಂಡಿದ್ದೀನಿ ಅಂತ ಅವರೇ ಹೇಳಿದ್ದಾರೆ. ಕೋರ್ಟ್‌ಗೆ ಹಾಕಿಕೊಂಡ ಮೇಲೆ ಮಾಧ್ಯಮದ ಮುಂದೆ ಬರುವುದೇನಿದೆ? ಎಲೆಕ್ಷನ್ ಹತ್ತಿರ ಬರುತ್ತಿದೆ ಅಂತ ಹೀಗೆ ಮಾತನಾಡುತ್ತಿದ್ದಾರೆ. ಎಂಟು, ಒಂಭತ್ತು ತಿಂಗಳ ಹಿಂದೆ ಆಗಿರೋದು ಅಂತ ಅವರೇ ಹೇಳಿದ್ದಾರೆ. ಆಗ ನಡೆದಿದ್ದನ್ನು ಈಗ ಏಕೆ ಮಾತನಾಡುತ್ತಿದ್ದಾರೆ" ಎಂದು ಪ್ರಜ್ವಲ್ ರೇವಣ್ಣ ಪ್ರಶ್ನಿಸಿದರು.