ಬೇಲೂರು (ಹಾಸನ): ಮುಸ್ಲಿಮರ ಕಠಿಣ ಉಪವಾಸದ ಸಂದರ್ಭದಲ್ಲಿ ಮೀಸಲಾತಿ ತೆಗೆದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದರು. ಬೇಲೂರು ಚನ್ನಕೇಶವ ರಥೋತ್ಸವದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು ಮಾಡದ ಅಭಿವೃದ್ಧಿ ಕಾರ್ಯಗಳನ್ನು, ಅಲ್ಪಾವಧಿಯಲ್ಲಿ ಅಧಿಕಾರದಲ್ಲಿದ್ದ ಜೆಡಿಎಸ್ ಸರ್ಕಾರ ಮಾಡಿದೆ ಎಂದರು.
ದೇವೇಗೌಡರು ಮುಸ್ಲಿಮರಿಗೆ ಮೀಸಲಾತಿ ನೀಡುವ ಮೂಲಕ ಅವರ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಟ್ಟಿದ್ದರು. ಆದರೆ ಮುಸ್ಲಿಂ ಸಮಾಜವನ್ನು ತುಳಿಯುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ಮುಸ್ಲಿಮರು ಇಂದು ಕಠಿಣ ಉಪವಾಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮೀಸಲಾತಿಯನ್ನ ತೆಗೆದು ಬೇರೆಯವರಿಗೆ ನೀಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಪಕ್ಷಗಳಿಂದ ತಂತ್ರಗಾರಿಕೆ- ರೇವಣ್ಣ.. ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಮುಗಿಸಬೇಕೆಂದು ಹಲವು ತಂತ್ರಗಾರಿಕೆ ನಡೆಸುತ್ತಿವೆ. ಆದರೆ, ಚನ್ನಕೇಶವನ ಆಶೀರ್ವಾದ ಮತ್ತು ದೇವೇಗೌಡರು ಇರುವ ತನಕ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದ ಅವರು, ಮೊದಲು ಹಣ ಕೊಟ್ಟು ಪ್ರಚಾರ ಮಾಡಿಸಿಕೊಳ್ಳಬೇಕಿತ್ತು. ಆದರೆ ಇಂದು ಮಾಧ್ಯಮಗಳಲ್ಲಿ ನಮಗೆ ಉಚಿತವಾಗಿ ಪ್ರಚಾರ ಸಿಗುತ್ತಿದೆ. ಅದಕ್ಕೆ ಮಾಧ್ಯಮಗಳಿಗೆ ಧನ್ಯವಾದಗಳು ಎಂದು ನಿಮ್ಮ ಆಶೀರ್ವಾದದಿಂದ ಈ ಬಾರಿ ಜೆಡಿಎಸ್ 120 ಸ್ಥಾನ ಗೆಲ್ಲಲಿ, ನಿಮಗೆ ದೇವರು ಒಳ್ಳೆಯದು ಮಾಡಲಿ ಎಂದರು.
ಬೇಲೂರು ಶಾಸಕ ಕೆ ಎಸ್ ಲಿಂಗೇಶ್ 750 ಕೋಟಿ ಹಣವನ್ನು ಲೂಟಿ ಹೊಡೆದಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಲಿಂಗೇಶ್ ಒಬ್ಬ ಪಾಪದ ಮನುಷ್ಯ. ಎರಡು ರಾಷ್ಟ್ರೀಯ ಪಕ್ಷಗಳು ಸಂಚು ರೂಪಿಸಿ ನಮ್ಮ ಪಕ್ಷದ ಶಾಸಕನನ್ನು ರಾಜಕೀಯವಾಗಿ ಮುಗಿಸಲು ನೋಡುತ್ತಿದ್ದಾರೆ. ಬೇಲೂರಿಗೆ ಶಾಸಕರಾಗಿ ಬಂದ ಬಳಿಕ ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಕಡತ ತೆಗೆದು ನೋಡಲಿ ಎಂದು ರೇವಣ್ಣ ಹೇಳಿದರು.