ಹಾಸನ:ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಜೊತೆ ಜೊತೆಗೆ ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಎಂದು ಮಾಧ್ಯಮ ಗುರುತಿಸಿಕೊಂಡಿದೆ. ಮೂರು ಅಂಗಗಳಿಗೂ ಮಿಗಿಲಾಗಿ ಪ್ರಬಲವಾದ ಶಕ್ತಿ ಪತ್ರಿಕೋದ್ಯಮಕ್ಕಿದೆ. ಆದರೆ ಇಂದು ಆ ಪತ್ರಿಕಾ ರಂಗ ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಸಂಕಷ್ಟವನ್ನು ಎದುರಿಸುತ್ತಿದೆ. 1993 ರಲ್ಲಿ ವಿಶ್ವಸಂಸ್ಥೆ ಮೇ 3 ಅನ್ನು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಎಂದು ಘೋಷಿಸಿತು. ಕರ್ತವ್ಯದಲ್ಲಿ ನಿರತರಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಪತ್ರಕರ್ತರಿಗೆ ಗೌರವ ನಮನ ಸಲ್ಲಿಸಲು ಸಲುವಾಗಿಯೂ ಈ ದಿನವನ್ನು ಆಚರಿಸಲಾಗುತ್ತದೆ.
ಈ ಮೇಲಿನ ಮೂರು ಅಂಗಗಳ ಉತ್ತಮ ಸಾಧನೆಗಳನ್ನು, ಕಾರ್ಯವೈಖರಿಗಳನ್ನು ಜೊತೆಗೆ ಹುಳುಕುಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ದೃಶ್ಯ ಹಾಗೂ ಪತ್ರಿಕಾ ಮಾಧ್ಯಮ ಮಾಡುತ್ತವೆ. ಆದ್ರೆ ಪತ್ರಿಕೋದ್ಯಮ ಆರಂಭವಾದಾಗಿನಿಂದಲೂ ಪತ್ರಿಕೆಗಳನ್ನು, ಪತ್ರಕರ್ತರನ್ನು, ಪತ್ರಿಕಾ ಸ್ವಾತಂತ್ರ್ಯವನ್ನು ಧಮನಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ವಸ್ತುನಿಷ್ಠವಾದ ವರದಿಗಳಿಗೆ ಅಡ್ಡಗಾಲು ಹಾಕುವುದು, ಪತ್ರಕರ್ತರನ್ನು ಧಮನಿಸುವುದು, ಅವರ ಹತ್ಯೆಗೆ ಯತ್ನಿಸುವುದು ಮುಂತಾದ ಘಟನೆಗಳು ದಿನನಿತ್ಯ ಕೇಳಿ ಬರುತ್ತಿವೆ. ಇದನ್ನೆಲ್ಲಾ ನಿವಾರಿಸಿ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪ್ರತಿವರ್ಷ ಮೇ 3ನೇ ತಾರೀಖಿನಂದು ವಿಶ್ವ ಪತ್ರಕರ್ತರ ಸ್ವಾತಂತ್ರ್ಯ ದಿನ ಎಂದು ಆಚರಿಸಲಾಗುತ್ತದೆ.
ಮಾಧ್ಯಮದವರನ್ನ ವಾರಿಯರ್ಸ್ ಪಟ್ಟಿಗೆ ಸೇರಿಸಿ: ರೇವಣ್ಣ ಸರ್ಕಾರಕ್ಕೆ ಆಗ್ರಹ ಮಾಧ್ಯಮಗಳ ವರದಿಗಾರರಿರಬಹುದು, ಸಂಪಾದಕರು ಅಥವಾ ಛಾಯಾಗ್ರಾಹಕರುಗಳು ಯಾವುದಾದರೊಂದು ಘಟನೆಗಳು ಅಥವಾ ಪ್ರಕರಣಗಳು ಜರುಗಿದ ಮರು ಕ್ಷಣದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ನಾಲ್ಕನೇ ಪತ್ರಿಕಾರಂಗವೆಂದು ಕರೆಸಿಕೊಳ್ಳುವ ನಮ್ಮ ಅಂಗಕ್ಕೆ ಸಾಮಾಜಿಕ, ಆರ್ಥಿಕ ಭದ್ರತೆಯಿಲ್ಲ. ಹೀಗಾಗಿ ಸರ್ಕಾರ ನಮಗೆ ಎರಡು ಭದ್ರತೆಯ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಬೇಕು. ನಮ್ಮಗಳನ್ನು ವಿಮಾ ವ್ಯಾಪ್ತಿಗೆ ಸೇರಿಸಬೇಕು. ಆಗ ಮಾತ್ರ ನಾವು ವಿಶ್ವದಲ್ಲಿ ನಾಲ್ಕನೇ ಅಂಗ ಎಂದು ಹೇಳಿಕೊಳ್ಳಲು ಸಾಧ್ಯವಾಗುತ್ತದೆ.
ಕಳೆದ ಒಂದುವರೆ ವರ್ಷದಿಂದ ಕೋವಿಡ್ ಸಂದರ್ಭದಲ್ಲಿ ಮಾಧ್ಯಮದವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಇವರುಗಳನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿಲ್ಲ. ಯಾವುದೇ ಮೂಲ ಸೌಕರ್ಯ ಒದಗಿಸಿಲ್ಲ. ಪತ್ರಕರ್ತರು ಸಾವನ್ನಪ್ಪಿದ್ರೆ 20 ಲಕ್ಷ ಪರಿಹಾರದ ಜೊತೆಗೆ, ವಿಮೆ ವ್ಯಾಪ್ತಿಗೆ ತಂದು ಅವರಿಗೂ ಸರ್ಕಾರ ನೆರವಾಗಬೇಕು. ಇಲ್ಲ ಸರ್ಕಾರದ ಹುಳುಕುಗಳನ್ನು ಮುಚ್ಚಿಡ್ಕೋಬೇಕೆಂದ್ರೆ ಈ ಸಂದರ್ಭದಲ್ಲಿ ಅವರನ್ನು ಬ್ಯಾನ್ ಮಾಡಿಬಿಡಿ ಎಂದು ಆಕ್ರೋಶದಲ್ಲಿಯೇ ಮಾತನಾಡಿದ್ರು ಮಾಜಿ ಸಚಿವ ರೇವಣ್ಣ.
ಇನ್ನು ಮಳೆ, ಚಳಿ, ಬಿಸಿಲು ಯಾವುದೇ ಇದ್ರು ಎಷ್ಟೆ ಸಮಸ್ಯೆಯಾದರು ನಿತ್ಯ ಮನೆಬಾಗಿಲಿಗೆ ಪೇಪರ್ ಬಂದ್ ಬೀಳುತ್ತೆ. ಆದ್ರೆ ಅಂತಹ ಪೇಪರ್ ಹಾಕುವವರಿಗೂ ಇಂದು ಯಾವುದೇ ಬೆಲೆ ಇಲ್ಲದಂತಾಗಿದೆ. ಅವರುಗಳನ್ನು ವಾರಿಯರ್ಸ್ ಆಗಿ ಮಾಡಬೇಕು. ಕಳೆದ ಬಾರಿ ನಮಗೆ ಯಾವುದೇ ಕೋವಿಡ್ ಕಿಟ್ ನೀಡಲ್ಲ. ಈ ಬಾರಿಯಾದರೂ ಪತ್ರಿಕಾ ವಿತರಕರಿಗೆ ಕೋವಿಡ್ ಕಿಟ್ ಜೊತೆಗೆ ವಾರಿಯರ್ಸ್ ಎಂದು ಪರಿಗಣಿಸಬೇಕು ಎಂಬುದು ಹಾಸನದ ಪತ್ರಿಕಾ ವಿತರಕರ ಮನವಿಯಾಗಿದೆ.
ಯಾವುದೇ ಸರ್ಕಾರ ಬಂದ್ರೂ ಅವರ ಹಿಂದೆ ವಾಚ್ ಡಾಗ್ ರೀತಿ ಕೆಲಸ ಮಾಡುವವರು ಪತ್ರಕರ್ತರು. ಅಂತಹವರಿಗೆ ಇಂದು ಕನಿಷ್ಠ ಕೆಲವು ಭದ್ರತೆಗಳಿಂದ ವಂಚಿತರಾಗಿರುವುದು ನಿಜಕ್ಕೂ ಬೇಸರದ ಸಂಗತಿ. ದೇಶವಷ್ಟೆಯಲ್ಲದೇ ವಿಶ್ವದ ಯಾವುದೇ ಭಾಗದಲ್ಲಿನ ಸುದ್ದಿಗಳನ್ನು ಕ್ಷಣ ಮಾತ್ರದಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡ್ತಿದ್ದಾರೆ. ಅಂತಹ ಸೇವಾ ನಿರತರಿಗೆ ಸರ್ಕಾರ ವಿಶೇಷ ಸೌಲಭ್ಯ ಒದಗಿಸಬೇಕು.
1993 ರಲ್ಲಿ ಯುನೈಟೆಡ್ ನೇಷನ್ಸ್ನ ಜನರಲ್ ಅಸೆಂಬ್ಲಿಯಲ್ಲಿ ಮೇ 3ನೇ ದಿನಾಂಕವನ್ನು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಬೇಕು ಎಂದು ನಿರ್ಧರಿಸಲಾಯಿತು. ಪತ್ರಿಕಾ ಸ್ವಾತಂತ್ರ್ಯದ ಮೂಲ ತತ್ವಗಳ ರಕ್ಷಣೆ. ಜಾಗತಿಕವಾಗಿ ವಿಶ್ವದಾದ್ಯಂತ ಪತ್ರಿಕಾ ಸ್ವಾತಂತ್ರ್ಯ ಮೌಲ್ಯಮಾಪನ, ಮಾಧ್ಯಮಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಖಂಡಿಸುವುದು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವ ಉದ್ದೇಶದಿಂದ ಇಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಸರ್ಕಾರ ಮುಂದಿನ ದಿನದಲ್ಲಿ ಪ್ರತಿಯೊಬ್ಬ ಪತ್ರಿಕಾ ಸಿಬ್ಬಂದಿಗಳಿಗೂ ಆರ್ಥಿಕ, ಸಾಮಾಜಿಕ, ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ವಾರಿಯರ್ಸ್ ಆಗಿ ಪರಿಗಣಿಸಬೇಕು ಎಂಬುದು ಪ್ರತಿಯೊಬ್ಬ ಪತ್ರಕರ್ತನ ಮನವಿಯಾಗಿದೆ.