ಹಾಸನ :ಗ್ರಾಮ ಪಂಚಾಯತ್ ಮೀಸಲು ಪಟ್ಟಿ ಪ್ರಕಟಿಸುವುದಕ್ಕೆ ಬಿಜೆಪಿ ಕಾನೂನುಬಾಹಿರ ಚಟುವಟಿಕೆ ಮಾಡುತ್ತಿದೆ. ಸದ್ಯದಲ್ಲಿಯೇ ಸಾಕ್ಷಿ ಸಮೇತ ನ್ಯಾಯಾಲಯಕ್ಕೆ ಒಪ್ಪಿಸುತ್ತೇನೆ ಮತ್ತು ಇದರ ಬಗ್ಗೆ ಉಗ್ರ ಹೋರಾಟ ಮಾಡುತ್ತೇನೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಬಿಜೆಪಿ ವಿರುದ್ಧ ಹರಿಹಾಯ್ದರು.
ಹಾಸನದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ವಿಚಾರದಲ್ಲಿ ಕೆಲ ಬಿಜೆಪಿ ನಾಯಕರು ತಮಗೆ ಬೇಕಾದ ಹಾಗೆ ಮೀಸಲಾತಿ ನಿಗದಿ ಮಾಡಿಸಲು ಮುಂದಾಗಿದ್ದಾರೆ. ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಕರೆ ಮಾಡಿ ಬಿಜೆಪಿಗೆ ಬೆಂಬಲ ನೀಡಿದ್ರೆ ಮೀಸಲಾತಿಯನ್ನು ನಿಮ್ಮ ಕಡೆ ಬರುವ ಹಾಗೆ ಮಾಡಿಸಿಕೊಳ್ಳುತ್ತೇವೆ.
ನಮ್ಮ ಪಕ್ಷಕ್ಕೆ ಸೇರಿಕೊಳ್ಳಿ ಎಂದು ದೂರವಾಣಿ ಸಂಪರ್ಕದ ಮೂಲಕ ಒತ್ತಡ ಹೇರುತ್ತಿದ್ದಾರೆ. ಅವರು ಮಾತನಾಡಿರುವ ಆಡಿಯೋಗಳು ಕೂಡ ನನ್ನ ಬಳಿ ಇದೆ. ಸಾಕ್ಷಿ ಬೇಕೆಂದ್ರೆ ನ್ಯಾಯಾಲಯದ ಸಮ್ಮುಖದಲ್ಲಿಯೇ ಅದನ್ನ ಬಹಿರಂಗಪಡಿಸುತ್ತೇನೆ ಎಂದು ಗಂಭೀರವಾಗಿ ಆರೋಪಿಸಿದರು.
ಪಂಚಾಯತ್ ರಾಜ್ ತಿದ್ದುಪಡಿ ಮಾಡುವ ಸಂದರ್ಭದಲ್ಲಿಯೇ ಚುನಾವಣೆಗೂ ಮುನ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿಯನ್ನು ಪ್ರಕಟ ಮಾಡಬೇಕು ಎಂಬ ನಿಯಮವಿದ್ದರೂ ಚುನಾವಣಾ ಆಯೋಗ ಪ್ರಕಟಿಸದೇ ಸರ್ಕಾರದ ಏಜೆಂಟ್ ಆಗಿ ವರ್ತಿಸುತ್ತದೆ.