ಹಾಸನ: ನಮ್ಮ ಕುಟುಂಬ ಸದಸ್ಯರು ಯಾರೂ ಬೇಡ. ಹಾಸನದಲ್ಲಿ ಓರ್ವ ಸಾಮಾನ್ಯ ಕಾರ್ಯಕರ್ತನನ್ನು ತಂದು ನಿಲ್ಲಿಸಿ ಗೆಲ್ಲಿಸುತ್ತೇವೆ. ಹಣದ ಅಹಂಕಾರದಲ್ಲಿ ಹಾಗೇ ಆಡುತ್ತಿದ್ದಾರೆ. ಮುಂದಿನ 2023ರ ಚುನಾವಣೆಯಲ್ಲಿ ನಾನೇ ಹಾಸನದ ಮುಂದಾಳತ್ವ ವಹಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶಾಸಕ ಪ್ರೀತಂ ಗೌಡ ಅವರಿಗೆ ಟಾಂಗ್ ನೀಡಿದ್ದಾರೆ.
ಹಾಸನ ಚನ್ನರಾಯಪಟ್ಟಣ ಸಿ.ಎನ್.ಬಾಲಕೃಷ್ಣ ನಿವಾಸದಲ್ಲಿ ಮಾತನಾಡಿದ ಅವರು, ಹಾಸನ ವಿಧಾನ ಸಭಾ ಚುನಾವಣೆಯನ್ನು ಈ ಬಾರಿ ನಾನೇ ಮುಂದಾಳತ್ವ ವಹಿಸುತ್ತೇನೆ. ಅಲ್ಲಿನ ಶಾಸಕರಿಗೆ ಹಣದ ಮದವಿದೆ. 50 ಸಾವಿರಕ್ಕಿಂತ ಕಡಿಮೆ ಮತ ಬಂದರೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಅಂದಿದ್ದಾರೆ. ಪಾಪ ಅವರು ಆ ರಿಸ್ಕ್ ತಗೊಳ್ಳೊದು ಬೇಡ ಎಂದು ವ್ಯಂಗ್ಯವಾಡಿದರು.
ಎಂತೆಂಥವರನ್ನು ನಾನು ನೋಡಿದ್ದೇವೆ. ಇವರು ಯಾವ ಲೆಕ್ಕ. ಪಕ್ಷದ ಒಮ್ಮತದ ಅಭಿಪ್ರಾಯ ಪಡೆದು ಹಾಸನಕ್ಕೆ ಮುಂದಿನ ದಿನದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ನೋಡ್ತಿರಿ ಎಂದು ಪ್ರತ್ಯುತ್ತರ ನೀಡಿದರು.