ಕರ್ನಾಟಕ

karnataka

ETV Bharat / state

ಮಂಡ್ಯ ಗೌಡರ ಬಗ್ಗೆ ಮುನಿರತ್ನಗೆ ಏನು ಗೊತ್ತು?: ಹೆಚ್​.ಡಿ.ಕುಮಾರಸ್ವಾಮಿ

ಮುನಿರತ್ನ ಅವರಿಗೆ ಮಂಡ್ಯ ಒಕ್ಕಲಿಗರ ಬಗ್ಗೆ ಗೊತ್ತಿದೆಯಾ?. ಸಿನಿಮಾ ತೆಗೀಲಿಕ್ಕೆ ಕಾಲ್ಪನಿಕ ಕಥೆಯಾಗಿ ಅಶ್ವತ್ಥ ಮತ್ತು ಅಶೋಕ್ ಸಬ್ಜೆಕ್ಟ್ ನೀಡಿರಬೇಕು-ಹೆಚ್.ಡಿ.ಕುಮಾರಸ್ವಾಮಿ

HD Kumaraswamy
ಹೆಚ್​.ಡಿ ಕುಮಾರಸ್ವಾಮಿ

By

Published : Mar 17, 2023, 10:08 AM IST

ಮುನಿರತ್ನ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ಹಾಸನ: ಉರಿಗೌಡ ಹಾಗೂ ನಂಜೇಗೌಡ ವಿಚಾರದಲ್ಲಿ ಆರ್.ಅಶೋಕ್ ಮತ್ತು ಅಶ್ವತ್ಥ ನಾರಾಯಣ ಸಂಶೋಧನೆ ಮಾಡಿದ್ದಾರೆ ಎಂಬ ಮುನಿರತ್ನ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಅರಕಲಗೂಡಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, "ಮುನಿರತ್ನನಿಗೆ ಮಂಡ್ಯ ಒಕ್ಕಲಿಗರ ಬಗ್ಗೆ ಗೊತ್ತಿದೆಯಾ?. ಆರ್.ಅಶೋಕ್ ಮತ್ತು ಅಶ್ವತ್ಥ ನಾರಾಯಣ ಸಂಶೋಧನೆ ಮಾಡಿ ಸಿನಿಮಾ ತೆಗೆಯೋದಕ್ಕೆ ಸಬ್ಜೆಕ್ಟ್ ಕೊಟ್ಟಿದ್ದಾರಂತಾ?. ಸಿನಿಮಾ ಮಾಡಲು ಯಾರ ಬಳಿಯಾದ್ರು ಸಂಶೋಧನೆ ಮಾಡಿಸಿಕೊಂಡು ಸಂಭಾಷಣೆ ಮತ್ತು ಸ್ಕ್ರಿಪ್ಟ್​ ಅ​ನ್ನು ಮುನಿರತ್ನ ತಯಾರಿಸಿಕೊಂಡಿರಬೇಕು" ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಎರಡು ಕಡೆ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿ, "ನನಗೆ ಹಲವು ಕಡೆ ಒತ್ತಡ ಇದೆ. ಉತ್ತರ ಕರ್ನಾಟಕಕ್ಕೆ ಸಂದೇಶ ಕೊಡಲು ನವಲಗುಂದದಲ್ಲಿ ಬಂದು ಸ್ಪರ್ಧಿಸಿ. ಅಲ್ಲಿ ನಿಂತರೆ ಉತ್ತರ ಕರ್ನಾಟಕದಲ್ಲಿ 15 ರಿಂದ 20 ಸೀಟು ಗೆಲ್ಲುವ ನಿರೀಕ್ಷೆಯಿದೆ ಎನ್ನುತ್ತಿದ್ದಾರೆ. ನಾನು ಆ ರೀತಿ ಮಾಡಿದರೆ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಮಾಡಿದಂತಾಗುತ್ತದೆ. ಚನ್ನಪಟ್ಟಣದಲ್ಲಿ ನಾನು ಗೆಲ್ಲೋದಕ್ಕೆ ನಿರ್ಣಯ ಆಗಿದೆ. ಇದು ಪಕ್ಷ ಹಾಗೂ ಕಾರ್ಯಕರ್ತರ ನಿರ್ಣಯ" ಎಂದರು.

ಹಾಸನ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಮಾತನಾಡಿ, "ನಾನು ಕೂಡ ಕೆ.ಎಂ.ರಾಜೇಗೌಡರಿಗೆ ಚುನಾವಣೆ ಸಿದ್ಧತೆ ಹೇಗೆ ಮಾಡಿಕೊಂಡಿದ್ದೀರಿ ಎಂದು ಕೇಳಿದ್ದೇನೆ. ಅವರ ಹೆಸರನ್ನು ಕೆಲವರು ಚರ್ಚೆ ಮಾಡಿದ್ದಾರೆ. ದೇವೇಗೌಡರ ಮುಂದೆ ಚರ್ಚೆ ಆಗಿರುವುದು ನಿಜ. ಹಾಗಂತ ಅದೇ ಅಂತಿಮ ಅಲ್ಲ. ನಾನು ಈಗಾಗಲೇ ಈ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ. ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸಿದ್ದೇನೆ" ಎಂದು ಹೇಳಿದರು.

ಅಭ್ಯರ್ಥಿ ಗೆಲ್ಲಲು ಸೂಕ್ತ ನಿರ್ಣಯ: "ರಾಷ್ಟ್ರೀಯ ಅಧ್ಯಕ್ಷರ ಜತೆ ಚರ್ಚೆ ಮಾಡುತ್ತೇನೆ. ನನಗೆ ಅಲ್ಲಿ ಯಾರನ್ನು ಸೋಲಿಸಬೇಕು ಅನ್ನೋದಲ್ಲ. ನನ್ನ ಅಭ್ಯರ್ಥಿ ಗೆಲ್ಲಬೇಕು ಅಷ್ಟೇ. ಅಭ್ಯರ್ಥಿ ಗೆಲ್ಲಲು ಸೂಕ್ತ ನಿರ್ಣಯ ಮಾಡುತ್ತೇವೆ. ಹಾಸನ ಮತದಾರರ ವಿಶ್ವಾಸಗಳಿಸಲು ನನ್ನ ಕಾರ್ಯಕರ್ತರು ಮಾನಸಿಕವಾಗಿ ಸ್ಥೈರ್ಯ ತುಂಬಬೇಕು. ನಾನು ಸಂಗ್ರಹಿಸಿರುವ ಮಾಹಿತಿಯನ್ನು ರಾಷ್ಟ್ರೀಯ ಅಧ್ಯಕ್ಷರು ಮತ್ತು ರೇವಣ್ಣ ಜತೆ ಚರ್ಚೆ ಮಾಡಿ ಸಮರ್ಥವಾದ ಅಭ್ಯರ್ಥಿಯನ್ನ ಚುನಾವಣೆಗೆ ನಿಲ್ಲಿಸುತ್ತೇನೆ. ಹಾಸನದ ಚುನಾವಣೆ ತ್ಯಾಗದ ಪ್ರಶ್ನೆ ಅಲ್ಲ. ಕ್ಷೇತ್ರದಲ್ಲಿ ನನ್ನ ಕಾರ್ಯಕರ್ತರು ಬಲಿಪಶು ಆಗಬಾರದು" ಎಂದರು.

"ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬಣಗಳು ಇಲ್ಲ. ಇರುವುದು ಕೇವಲ ದೇವೇಗೌಡರ ಬಣ. ಯಾವ ಬಣಕ್ಕೂ ಅವಕಾಶ ಕೊಡುವುದಿಲ್ಲ. ಇನ್ನೂ ನೂರು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕಿದೆ. ನಾನು ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿದ್ದೇನೆ. ನನಗೂ ಸಮಯವಿಲ್ಲ. ಶೀಘ್ರ ತೀರ್ಮಾನ ಮಾಡುತ್ತೇವೆ. ಒಂದು ವಾರ ಅಥವಾ 10 ದಿನಗಳಲ್ಲಿ ಎಲ್ಲದಕ್ಕೂ ಅಂತಿಮ ತೆರೆ ಎಳೆಯಲಾಗುವುದು. ಯಾರಿಗೂ ಅಸಮಾಧಾನ ಆಗದೆ ಎಲ್ಲರ ಅಭಿಪ್ರಾಯವನ್ನು ಪಡೆದೆ ಒಳ್ಳೆಯ ಒಂದು ಅಭ್ಯರ್ಥಿಯನ್ನ ಘೋಷಣೆ ಮಾಡಲು ದೇವೇಗೌಡರು ಸಮರ್ಥರಿದ್ದಾರೆ. ಅವರ ಮುಖಾಂತರ ಅಭ್ಯರ್ಥಿ ಘೋಷಣೆ ಮಾಡಿಸುತ್ತೇವೆ" ಎಂದರು.

ವಿಶೇಷ ಜವಾಬ್ದಾರಿ: "ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ವಿಶೇಷ ಜವಾಬ್ದಾರಿ ನೀಡುತ್ತೇನೆ. ಹಾಸನ ಒಂದೇ ಅಲ್ಲ 224 ಕ್ಷೇತ್ರ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ. ಸ್ವಲ್ಪ ವಿಶೇಷವಾಗಿ ಹಾಸನ ಜಿಲ್ಲೆ ಬಗ್ಗೆ ರೇವಣ್ಣರ ಜತೆ ಕೈ ಜೋಡಿಸುತ್ತೇನೆ. ಜಿಲ್ಲೆಯ ಏಳಕ್ಕೆ ಏಳು ಸ್ಥಾನ ಗೆಲ್ಲಬೇಕು. ಆದ್ದರಿಂದ ರೇವಣ್ಣ ಅವರಿಗೆ ಸಹಕಾರ ನೀಡುತ್ತೇನೆ. ಏಳಕ್ಕೆ ಏಳು ಗೆದ್ದರೆ ರೇವಣ್ಣನವರಿಗೆ ಕಿರೀಟ ಹೋಗೋದು. ನಮಗ್ಯಾರಿಗೂ ಅಲ್ಲ. ಅರಕಲಗೂಡು ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿ ಎ.ಮಂಜು ಸ್ಪರ್ಧೆ ಮಾಡುತ್ತಿದ್ದು, ಯಾವುದೇ ರೀತಿಯ ಸಮಸ್ಯೆ ಇಲ್ಲ" ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ:ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನಾನೇ ಅಂತಿಮ ತೀರ್ಮಾನ ತೆಗೆದುಕೊಳ್ಳೋದು.. ಸಿ ಎಂ ಇಬ್ರಾಹಿಂಗೆ ಹೆಚ್​ಡಿಕೆ ಬ್ರೇಕ್​

ABOUT THE AUTHOR

...view details