ಹಾಸನ: ಸಣ್ಣ ವಿಚಾರವನ್ನು ದೊಡ್ಡದು ಮಾಡಿದ್ದಕ್ಕೆ ಕಾಂಗ್ರೆಸ್ ಪಕ್ಷದವರೇ ಬೇಸರಗೊಂಡಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಜನತೆಗೆ ಕ್ಷಮೆ ಯಾಚಿಸುವ ಮೂಲಕ ದಂಡವನ್ನೂ ಪಾವತಿ ಮಾಡಿದ್ದಾರೆ. ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸಿಬಿಡಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಮನವಿ ಮಾಡಿದರು.
ಹಾಸನದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ಕರೆಂಟ್ ಕಳ್ಳ ಪೋಸ್ಟರ್ ಅಂಟಿಸಿದ್ದು ಸರಿಯಲ್ಲ. ಎರಡು ಬಾರಿ ಮುಖ್ಯಮಂತ್ರಿ ಆದವರನ್ನು ಹೀಗೆ ನಡೆಸಿಕೊಂಡಿದ್ದು ತಪ್ಪು ಎಂದರು.
ಕುಮಾರಸ್ವಾಮಿ ಅವರಿಗೆ 2 ಸಾವಿರ ರೂ ಬಿಲ್ ಕಟ್ಟಲು ಯೋಗ್ಯತೆ ಇಲ್ಲ ಎಂಬಂತೆ ಬಿಂಬಿಸುವುದು ಸರಿಯಲ್ಲ. ಕಾಂಗ್ರೆಸ್‌ನವರು ಲೂಟಿ ಮಾಡಿರುವ ಭೂಮಿಯ ಬಗ್ಗೆ ತನಿಖೆ ಮಾಡಿದರೆ ಅದಕ್ಕೆ ಪೆನಾಲ್ಟಿ ಯಾರು ಕಟ್ತಾರೆ? ರೈತರನ್ನು ಕಳ್ಳರು ಅಂತೀರಾ? ಎಷ್ಟು ರೈತರು ಈ ರೀತಿ ಸಂಪರ್ಕ ಪಡೆದುಕೊಂಡಿರುತ್ತಾರೆ. ಅವರಿಂದ ಪೆನಾಲ್ಟಿ ಪಡೆದು ಸುಮ್ಮನಾಗಲ್ವಾ? ನೀವು ರೈತರಿಗೆ ಕೊಡಬೇಕಾದ ಟಿಸಿಗಳನ್ನು ಸರಿಯಾಗಿ ಕೊಡಿ. ಹಾಸನ ಜಿಲ್ಲೆಯೊಂದಕ್ಕೇ 27 ಸಾವಿರ ಟಿಸಿ ಬೇಕು ಎಂದು ರೈತರು ಹಣ ಕಟ್ಟಿದ್ದಾರೆ. ಟಿಸಿ ಕೊಡದಿದ್ದಕ್ಕೆ ಅವರು ಬೇರೆಡೆಯಿಂದ ಕನೆಕ್ಷನ್ ತೆಗೆದುಕೊಂಡರೆ ಅವರನ್ನು ಕರೆಂಟ್ ಕಳ್ಳರು ಅಂತೀರಾ? ರೈತರ ಹತ್ತಿರ 20 ಸಾವಿರ ರೂಪಾಯಿ ಕಟ್ಟಿಸಿಕೊಂಡು ಟಿಸಿ ಕೊಡುತ್ತಿಲ್ಲವಲ್ಲ. ರೈತರ ಹಣ ತಿಂದಿರುವ ನೀವೆಂಥ ಕಳ್ಳರು? ಇದನ್ನೆಲ್ಲ ಬಿಟ್ಟು ಪ್ರಜ್ಞಾವಂತ ರಾಜಕೀಯ ಮಾಡಿ ಎಂದು ಹೇಳಿದರು.