ಹಾಸನ :ಜೆಡಿಎಸ್ ಪಕ್ಷ ಉಳಿಯುವುದಿಲ್ಲ ಎಂದು ಎದುರಾಳಿಗಳು ಟೀಕೆಗಳನ್ನು ಮಾಡುತ್ತಿದ್ದಾರೆ. ನಾನು ಹುಟ್ಟು ಹೋರಾಟಗಾರ. ರಾಜ್ಯದಲ್ಲಿ ಪ್ರವಾಸ ಮಾಡಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತಿಳಿಸಿದರು.
ನಾನು ಹುಟ್ಟು ಹೋರಾಟಗಾರ, ಟೀಕಿಸಿದವರಿಗೆ ಉತ್ತರ ನೀಡುತ್ತೇನೆ ಅಂತಾರೆ ದೇವೇಗೌಡರು ನಗರದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರಾವಣ ಮಾಸದಲ್ಲಿ ನಾವು ಪ್ರತಿ ಶನಿವಾರ ಮನೆದೇವರ ದರ್ಶನ ಪಡೆಯುತ್ತೇವೆ. ಆ ನಿಟ್ಟಿನಲ್ಲಿ ಇಂದು ಇಲ್ಲಿಗೆ ಬಂದಿದ್ದೇನೆ. ನಮ್ಮ ಎದುರಾಳಿ ಪಕ್ಷದವರು ನಮ್ಮ ಪಕ್ಷ ಉಳಿಯುತ್ತೋ ಇಲ್ವೋ ಎಂದು ಟೀಕಿಸುತ್ತಾರೆ. ನನಗೆ ವಯಸ್ಸಾಯಿತು ಎಂದು ಸೋಮಾರಿತನ ತೋರುವುದಿಲ್ಲ. ನಾನು ಹುಟ್ಟು ಹೋರಾಟಗಾರ. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರತಿ ಜಿಲ್ಲೆಯಲ್ಲೂ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ಸದಸ್ಯತ್ವ ಇಲ್ಲದೇ ಯಾರಿಗೂ ಟಿಕೆಟ್ ನೀಡುವುದಿಲ್ಲ ಎಂದು ಸೂಚಿಸಲಾಗಿದೆ. ಎಲ್ಲಾ ಜಿಲ್ಲೆಯಲ್ಲೂ ಸದಸ್ಯತ್ವ ಪ್ರಾರಂಭಿಸಲಾಗಿದೆ ಎಂದರು.
ರಾಜ್ಯ ಸರ್ಕಾರ ಟ್ಯಾಕ್ಸ್ ಕಡಿಮೆ ಮಾಡಬಹುದು : ಪೆಟ್ರೋಲ್ ಮೇಲಿನ ಟ್ಯಾಕ್ಸ್ ಕಡಿಮೆ ಮಾಡಬಹುದು. ಈ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಸೇರಿದ್ದು, ಸರ್ಕಾರದ ಆರ್ಥಿಕತೆ ನೋಡಿ ಈ ರೀತಿ ನಿರ್ಧಾನ ತೆಗೆದುಕೊಳ್ಳಬಹುದು. ರಾಜ್ಯ, ಕೇಂದ್ರ ಸರ್ಕಾರ ಎರಡರಲ್ಲೂ ಅನೇಕ ಸಮಸ್ಯೆಗಳಿದ್ದು, ಇಲ್ಲಿಯವರೆಗೂ ರಾಜ್ಯಸಭಾ ಸದಸ್ಯರ ಅನುದಾನವೇ ಬಿಡುಗಡೆ ಆಗಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿಗೆ ಅನೇಕ ಬಾರಿ ಸಲಹೆ ನೀಡಿದ್ದೇನೆ : ನಾನು ಲೋಕಸಭಾ ಸದಸ್ಯನಾಗಿದ್ದಾಗ ಮೂರುವರೆ ಕೋಟಿ ರೂ. ಬಾಕಿ ಇದೆ. ನಾನು ರಾಜ್ಯಸಭಾ ಸದಸ್ಯನಾದ ನಂತರ ನನ್ನ ಕೈಲಾದಷ್ಟು ಜನಪರ ಕಾಳಜಿ ತೋರಿದ್ದು, ಪ್ರಧಾನಮಂತ್ರಿಗೆ ಅನೇಕ ಬಾರಿ ಪತ್ರದ ಮೂಲಕ ಸಲಹೆ ನೀಡಿದ್ದೇನೆ. ಕೃಷಿ ಕಾಯ್ದೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಹಠಮಾರಿ ದೋರಣೆ ತೋರುತ್ತಿದೆ. ಪ್ರತಿಭಟನೆ ಮಾಡುವ ರೈತರ ಮೇಲೆ ಲಾಠಿಚಾರ್ಜ್ ನಡೆದಿದೆ. ರೈತರೊಂದಿಗೆ ಕೂತು ಚರ್ಚಿಸಿ ಸಮನ್ವಯ ಕಾಪಾಡಬೇಕು. ಸಂಸತ್ತಿನಲ್ಲಿ ನಮ್ಮನ್ನು ನೋಡಿ ಕಿರಿಯರು ಕಲಿಯಬೇಕು ಮತ್ತು ಯುವ ರಾಜಕಾರಣಿಗಳಿಗೆ ನಾವು ಮಾದರಿ ಆಗಬೇಕು. ಆದರೆ, ನಾವೇ ಕೈಕೈ ಮಿಲಾಯಿಸುವ ಹಂತಕ್ಕೆ ಹೋದರೆ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತದೆ ಎಂದರು.
ಮಗನಿಗೆ ಟಿಕೆಟ್ ಬೇಕು ಅಂತಾ ಕೇಳಿದ್ದಾರೆ : ಜಿ.ಟಿ. ದೇವೇಗೌಡರು ಈಗಾಗಲೇ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಜೊತೆ ಅವರ ಜೊತೆ ಮಾತುಕತೆಯನ್ನೂ ಮಾಡಿದ್ದಾರೆ. ತಮ್ಮ ಮಗನಿಗೆ ಟಿಕೆಟ್ ನೀಡುವುದಾದ್ರೆ ಕಾಂಗ್ರೆಸ್ಗೆ ಬರ್ತೀನಿ ಎಂದಿದ್ದಾರೆ. ಸಿದ್ದರಾಮಯ್ಯ ಅವರು, ಹೈಕಮಾಂಡ್ ಈ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಗುಬ್ಬಿ ಶ್ರೀನಿವಾಸ್ ನನಗೆ ದೂರವಾಣಿ ಮೂಲಕ ಮಾತನಾಡಿದ್ದು, ಕೆಲವರು ಊಹಾಪೋಹ ಸುದ್ದಿ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇನ್ನು, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಭೆ ನಡೆದಿದ್ದು, ಆ ಸಭೆಯಲ್ಲಿ ಎಷ್ಟು ಜನ ಇದ್ದರು ಎಂದು ಗಮನಿಸಿದ್ರೆ ಪಕ್ಷದ ಸ್ಥಿತಿಗತಿ ತಿಳಿಯುತ್ತದೆ ಎಂದ ಅವರು, ಬಿಜೆಪಿ ಸಭೆಗೆ ಮಹತ್ವ ಇಲ್ಲ ಎಂದು ಪರೋಕ್ಷವಾಗಿ ಟೀಕಿಸಿದ್ರು. ಅರುಣ್ ಸಿಂಗ್ ಹೇಳಿಕೆ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿರುವುದರಿಂದ ಬಗ್ಗೆ ಮಾತನಾಡದೆ ಸುಮ್ಮನಾದರು.