ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆಗಳು ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿವೆ. ಈಗಾಗಲೇ ಜೆಡಿಎಸ್ನಿಂದ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸಲು ವೇದಿಕೆ ಸಜ್ಜು ಮಾಡಿಕೊಂಡು ಅಬ್ಬರದ ಪ್ರಚಾರ ನಡೆಸುವ ವೇಳೆಯಲ್ಲಿಯೇ ಮತ್ತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಮರಿಳಿ ತವರು ಕ್ಷೇತ್ರಕ್ಕೆ ಕರೆ ತರುವ ಪ್ರಯತ್ನಗಳು ನಡೆಯುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜ್ಯೋತಿಷಿಯೊಬ್ಬರು ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರವನ್ನು ತೊರೆಯಬಾರದು ಎಂದು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ, ಈಗ ಜೆಡಿಎಸ್ ನಾಯಕರಲ್ಲಿಯೇ ಗೊಂದಲ ಸೃಷ್ಟಿಯಾಗಿದೆ. ಅದಕ್ಕಾಗಿ ಸಚಿವ ರೇವಣ್ಣ ಅವರು ಆಲೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯ ನಂತರ ದೇವೇಗೌಡರು ಹಾಸನ ಲೋಕಸಭೆ ಕ್ಷೇತ್ರದಲ್ಲಿಯೇ ಸ್ಪರ್ಧೆಗೆ ಆಹ್ವಾನ ಮಾಡುವ ರೀತಿ ಹೇಳಿಕೆ ನೀಡಿರುವುದು ಕೂಡ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ವೇದಿಕೆ ಕಲ್ಪಿಸಿದಂತಾಗಿದೆ. ಇದರಿಂದಾಗಿ ಹಾಸನ ಲೋಕಸಭಾ ಕ್ಷೇತ್ರ ರಾಜಕೀಯ ಕುತೂಹಲ ಕೆರಳಿಸಿದೆ.
ಜೆಡಿಎಸ್ನ ನಿಯೋಜಿತ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಕೂಡ ಹಾಸನ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸುವುದು ಒಳಿತು ಎನ್ನುವ ಹೇಳಿಕೆ ನೀಡಿರುವುದು ಕೂಡ ಕಾರ್ಯಕರ್ತರಲ್ಲಿ ಗೊಂದಲ ಉಂಟುಮಾಡಿದೆ. ಈಗಾಗಲೇ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರದ ವೇಳೆಯಲ್ಲಿಯೇ ಒಂದು ರೀತಿ ಆತಂಕದ ಹೇಳಿಕೆ ನೀಡುತ್ತಿರುವುದು ಸರ್ಧೆಯಿಂದ ಯೂ-ಟರ್ನ್ ಹೊಡೆದಂತೆ ಕಾಣುತ್ತಿದೆ.