ಹಾಸನ:''ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಇನ್ನು ಶಕ್ತಿಯಿದ್ದು, ಶೀಘ್ರವೇ ಸಭೆ ಕರೆದು ಚರ್ಚೆ ಮಾಡಿ ಮುಂದಿನ ತೀರ್ಮಾನವನ್ನು ಕೈಗೊಳ್ಳುತ್ತೇವೆ. ಹಾಸನದಲ್ಲಿ ಶಾಸಕ ಹೆಚ್.ಪಿ. ಸ್ವರೂಪ್ ಪರ ನಾವೆಲ್ಲಾ ನಿಲ್ಲುತ್ತೇವೆ'' ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು. ನಗರದ ಖಾಸಗಿ ನಿವಾಸವೊಂದರಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಜೆಡಿಎಸ್ ಜಿಲ್ಲೆಯಲ್ಲಿ 4 ಸ್ಥಾನ ಗೆದ್ದಿದ್ದೇವೆ. ಮೂವರು ಸೋತಿದ್ದಾರೆ. ನಮಗೆ ಮತ ನೀಡಿದ ಎಲ್ಲರಿಗೂ ಧನ್ಯವಾದಗಳು. ಈ ಚುನಾವಣೆ ಫಲಿತಾಂಶವನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳುತ್ತೇವೆ. ಈ ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮನ್ನ ಮುಗಿಸಲು ಯತ್ನ ಮಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಒಳ್ಳೆ ಕಲಸ ಮಾಡಲಿ. ಅವರು ಕೊಟ್ಟಿರೊ ಗ್ಯಾರಂಟಿ ಕಾರ್ಡ್ ಪ್ರಕಾರ ಕೆಲಸ ಮಾಡಬೇಕು'' ಎಂದರು.
ಐದು ವರ್ಷ ಸಮಯಯಿದೆ ಎಲ್ಲವನ್ನೂ ಸರಿ ಮಾಡಿಕೊಳ್ಳುತ್ತೇವೆ:''ರಾಷ್ಟ್ರೀಯ ಪಕ್ಷಗಳ ಮುಖಂಡರೇ ಸೋತಿರುವಾಗ ನಮ್ಮದೇನಿದೆ. ಕೆಲ ನಾಯಕರು ನಮ್ಮನ್ನು ಮುಗಿಸಬೇಕು ಎಂದು ನಾಲ್ಕು ವರ್ಷದಿಂದ ಹೋರಾಟ ಮಾಡಿದ್ರು. ಆದರೆ, ಜನರು ನಮ್ಮನ್ನು ಉಳಿಸಿಕೊಂಡಿದ್ದಾರೆ. ನಾವು ಸೋಲು, ಗೆಲುವು ಎರಡನ್ನು ನೋಡಿದ್ದೇವೆ. ಕೋಮುವಾದಿಗಳನ್ನು ದೂರ ಇಡಬೇಕು ಎಂದು ಜನರು ಕಾಂಗ್ರೆಸ್ಗೆ ಬಹುಮತ ಕೊಟ್ಟಿದ್ದಾರೆ. ಒಂದು ಕ್ಷೇತ್ರದಲ್ಲಿ ನಾವು ಅಲ್ಪಮತದಿಂದ ಸೋತಿದ್ದೇವೆ. ಮಂಡ್ಯದಲ್ಲಿ ಕೂಡ ಜೆಡಿಎಸ್ ತೆಗೆಯಬೇಕು ಎಂದು ಪ್ರಯತ್ನ ಮಾಡಿದ್ರು. ಪ್ರಧಾನಿ ಹಾಸನ ಮಂಡ್ಯಕ್ಕೆ ಬಂದು ಹೋದ್ರು. ಚನ್ನಪಟ್ಟಣಕ್ಕೆ ಮೋದಿ ಬಂದಿದ್ದರೂ ಕುಮಾರಣ್ಣ ಗೆಲ್ಲಲಿಲ್ಲವೇ! ಇನ್ನೂ ನಮಗೆ ಐದು ವರ್ಷ ಸಮಯ ಇದೆ ಎಲ್ಲವನ್ನು ಸರಿ ಮಾಡಿಕೊಳ್ತೇವೆ ಎಂದು ಅವರು ಹೇಳಿದರು.
ಯಾರಾದ್ರೂ ಸಿಎಂ ಆಗಲಿ ಆದರೇ ಒಳ್ಳೆಯ ಕೆಲಸ ಮಾಡಿಲಿ:''ಬೇಲೂರಿನಲ್ಲಿ ಜೆಡಿಎಸ್ ಸೋಲಿಸಲೇಬೇಕು ಅಂತಾ ಪ್ರಧಾನಿ ಬಂದರು ಏನು ಮಾಡೋಕೆ ಆಗುತ್ತೆ. ಈ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆಯಲ್ಲಿ ಏನೂ ಪರಿಣಾಮ ಬೀರುವುದಿಲ್ಲ. ಕಾಲ ಇನ್ನೂ ಇದೆ ನೋಡ್ತಾ ಇರಿ. ದೇವೇಗೌಡರು ಸುಮ್ಮನೇ ಕೂರಲ್ಲ. ದೇವೇಗೌಡರಿಗೆ ಇನ್ನೂ ಶಕ್ತಿ ಇದೆ. ಕೂಡಲೇ ಜೆಡಿಎಸ್ ಸಭೆ ಕರೆದು ಈ ಬಗ್ಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ. ಹಾಸನದಲ್ಲಿ ಅಲ್ಪಸಂಖ್ಯಾತರು ನಮ್ಮ ಪಕ್ಷದ ಕೈ ಹಿಡಿದಿದ್ದಾರೆ. ಅಲ್ಪಸಂಖ್ಯಾತರಿಗೆ ಅವಕಾಶ ಕೊಟ್ಟಿದ್ದು ಜೆಡಿಎಸ್, ಬಿಜೆಪಿ ಅವರು ಅಧಿಕಾರದಿಂದ ಕೆಳಗೆ ಇಳಿಯುವಾಗ ಒಂದು ಯುನಿಟ್ಗೆ 70 ಪೈಸೆ ಏರಿಸಿ ಒಂದು ಶಾಕ್ ಕೊಟ್ಟಿದಾರೆ. ಇದನ್ನು ಇಳಿಸಲಿ. ಕಾಂಗ್ರೆಸ್ನಲ್ಲಿ ಯಾರಾದ್ರೂ ಸಿಎಂ ಆಗಲಿ ಆದರೇ ಒಳ್ಳೆಯ ಕೆಲಸ ಮಾಡಿಲಿ. ಹಾಸನದ ಅಭಿವೃದ್ಧಿ ಮಾಡಿದರೆ ಸಂತೋಷ'' ಎಂದು ಅವರು ಸಲಹೆ ನೀಡಿದರು.