ಹಾಸನ: ಚುನಾವಣಾ ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪ ಎದುರಿಸುತ್ತಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಹೈಕೋರ್ಟ್ ನೋಟಿಸ್ ಸ್ವೀಕರಿಸಿದ್ದಾರೆ.
ಪ್ರಕರಣ ಸಂಬಂಧ ಅವರ ವಿಳಾಸ ಹರದನಹಳ್ಳಿ ಗೆ ಕಳಿಸಿದ ನೋಟಿಸ್ ಮೂರು ಬಾರಿ ವಾಪಸಾಗಿದ್ದವು. ಬಳಿಕ ದೂರುದಾರರ ಮನವಿ ಮೇರೆಗೆ ನೋಟಿಸ್ ಅನ್ನು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು.
ಪೇಪರ್ ಪಬ್ಲಿಷ್ ಮಾಡಿದ ಬಳಿಕ ತಮ್ಮ ವಕೀಲ ಕೇಶವ ರೆಡ್ಡಿ ಅವರ ಮೂಲಕ ನೋಟಿಸ್ ಪಡೆದಿದ್ದಾರೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್, ಮೂರ್ತಿ ಮೈಕಲ್ ಡಿ ಕುನ್ಹ ಅವರ ಏಕಸದಸ್ಯ ಪೀಠ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿದೆ.
ಏನಿದು ಪ್ರಕರಣ..?
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಮಾಹಿತಿ ನೀಡಿದ ಆರೋಪದಡಿಯಲ್ಲಿ ಹಾಸನ ಬಿಜೆಪಿ ಅಭ್ಯರ್ಥಿಯಾಗಿದ್ದ ಎ.ಮಂಜು ಮತ್ತು ವಕೀಲ ದೇವರಾಜೇಗೌಡ ಹೈಕೋರ್ಟ್ನಲ್ಲಿ ಕೇಸ್ ಹಾಕಿದ್ದರು. ಈ ಸಂಬಂಧ ಹೈಕೋರ್ಟ್ ಪ್ರಜ್ವಲ್ ರೇವಣ್ಣಗೆ ನೋಟಿಸ್ ನೀಡಿತ್ತು. ಆದರೆ ಮೂರು ಬಾರಿಯೂ ಪ್ರಜ್ವಲ್ ರೇವಣ್ಣಗೆ ನೋಟಿಸ್ ತಲುಪಿರಲಿಲ್ಲ.
ಅಫಿಡವಿಟ್ನ ಅಡ್ರೆಸ್ನಲ್ಲಿ ಅವರಿಲ್ಲ ಎಂಬ ಉತ್ತರ ಕೇಳಿ ಬಂದಿತ್ತು. ಕೋರ್ಟ್ ಅಮೀನರು ಮತ್ತು ಹಾಸನ ಜಿಲ್ಲಾ ನ್ಯಾಯಾಧೀಶ ಮೂಲಕ ತಲುಪಿಸುವ ಪ್ರಯತ್ನ ವಿಫಲವಾಗಿತ್ತು.
ಈ ಬಗ್ಗೆ ಅರ್ಜಿದಾರರ ಪರ ವಕೀಲ ಪ್ರಮೀಳಾ ನೇಸರ್ಗಿ ಸೆಪ್ಟೆಂಬರ್ 3ರಂದು ಕೋರ್ಟ್ ಗಮನಕ್ಕೆ ತಂದಿದ್ದರು. ಅಲ್ಲದೆ ನೋಟಿಸ್ ಪ್ರತಿಯನ್ನು ಪತ್ರಿಕಾ ಪ್ರಕಟಣೆಗೆ ಮನವಿ ಮಾಡಿದರು. ಅದಕ್ಕಾಗಿ ಸೆಪ್ಟೆಂಬರ್ 6ರಂದು ಹೈಕೋರ್ಟ್ ಅನುಮತಿ ನೀಡಿದ್ದು, ಸೆಪ್ಟೆಂಬರ್ 10ರಂದು ಪತ್ರಿಕಾ ಪ್ರಕಟಣೆ ಮಾಡಿ 13ರಂದು ಅರ್ಜಿದಾರರು ಪ್ರತಿಯನ್ನು ಸಲ್ಲಿಸಿದ್ದರು.
ಈ ವೇಳೆ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ, ಪ್ರಜ್ವಲ್ ರೇವಣ್ಣ ಉದ್ದೇಶಪೂರ್ವಕವಾಗಿ ನೋಟಿಸ್ ಸ್ವೀಕರಿಸುವುದಿಲ್ಲವೆಂದು ಆರೋಪಿಸಿದರು.