ಹಾಸನ:ಜಿಲ್ಲೆಯ ಅಧಿದೇವತೆ ಹಾಸನಾಂಬೆ ದರ್ಶನೋತ್ಸವ ಸಂಪ್ರದಾಯದಂತೆ ಅಶ್ವಯುಜ ಮಾಸದ ಪೂರ್ಣಿಮೆಯ ನಂತರದ ಪ್ರಥಮ ಗುರುವಾರ ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆರೆದು ಆರಂಭವಾಗಲಿದೆ.
ವರ್ಷಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ... ಇಲ್ಲಿನ ವಿಶೇಷತೆ ಏನು ಗೊತ್ತಾ?
ಅಶ್ವಯುಜ ಮಾಸದ ಪೂರ್ಣಿಮೆಯ ನಂತರದ ಪ್ರಥಮ ಗುರುವಾರ ಹಾಸನಾಂಬೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆರೆಯಲಿದ್ದು, ಬಲಿಪಾಡ್ಯಮಿಯ ಮರು ದಿನ ಬೆಳಗ್ಗೆ ಧಾರ್ಮಿಕ ವಿಧಿ-ವಿಧಾನಗಳನ್ವಯ ಪೂಜೆ ನೆರವೇರಿಸಿ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ.
ವಾರಣಾಸಿಯಿಂದ ದಕ್ಷಿಣದತ್ತ ವಾಯು ವಿಹಾರಾರ್ಥವಾಗಿ ಬಂದ ಸಪ್ತ ಮಾತೃಕೆಯರಾದ ಬ್ರಾಹ್ಮಿದೇವಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿಯರು ಜಿಲ್ಲೆಯಲ್ಲಿಯೇ ನೆಲೆಸಿದರು. ಅವರಲ್ಲಿ ವೈಷ್ಣವಿ, ಕೌಮಾರಿ, ಮಹೇಶ್ವರಿ ದೇವಿಯರು ಈಗಿನ ಹಾಸನಾಂಬೆ ದೇವಾಲಯದಲ್ಲಿ ಹುತ್ತ ರೂಪದಿಂದ ಬ್ರಾಹ್ಮಿದೇವಿ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆಯಲ್ಲಿ ಕೆಂಚಾಂಬಿಕೆಯಾಗಿ ಹಾಗೂ ಚಾಮುಂಡಿ, ವಾರಾಹಿ, ಇಂದ್ರಾಣಿ ದೇವಿಯರು ನಗರದ ಮಧ್ಯ ಭಾಗದಲ್ಲಿರುವ ದೇವಿಗೆರೆಯಲ್ಲಿ ನೆಲೆಸಿದ್ದಾರೆ ಎನ್ನುವುದು ಇಲ್ಲಿನ ಧಾರ್ಮಿಕ ನಂಬಿಕೆ ಎನ್ನುತ್ತಾರೆ ಭಕ್ತರು.
ದರ್ಶನೋತ್ಸವದ ಆರಂಭದ ದಿನ ಮಾತ್ರವೇ ಅಲಂಕಾರಗಳಿಲ್ಲದ ದೇವಿಯ ವಿಶ್ವರೂಪ ದರ್ಶನಕ್ಕೆ ಅವಕಾಶವಿರುತ್ತದೆ. ಬಾಗಿಲು ತೆರೆಯುವ ದಿನದ ಸಂಜೆ ದೇವಿಗೆ ವಸ್ತ್ರಾಭರಣಗಳನ್ನು ಧರಿಸಿ, ಅಲಂಕರಿಸಿ ಅಧಿಕೃತವಾಗಿ ಪೂಜೆ ಆರಂಭಿಸಲಾಗುತ್ತದೆ. ದೇವಿಯ ವಿಶ್ವರೂಪ ದರ್ಶನದಿಂದ ಹೆಚ್ಚು ಪುಣ್ಯ ಲಭಿಸುವುದು ಎಂಬ ನಂಬಿಕೆ ಹಿನ್ನೆಲೆಯಲ್ಲಿ ಬಾಗಿಲು ತೆರೆದ ತಕ್ಷಣವೇ ದರ್ಶನ ಪಡೆಯಲು ಭಕ್ತರು ಬರುತ್ತಾರೆ. ಅಂದು ಅಧಿಕೃತವಾಗಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿಲ್ಲ. ಗರ್ಭಗುಡಿ ಬಾಗಿಲು ತೆರೆದ ತಕ್ಷಣ ದೇವಿಯ ಪ್ರಖರ ದೃಷ್ಟಿ ತಗುಲಿ ಯಾವುದೇ ತೊಂದರೆಯಾಗದಿರಲಿ ಎಂದು ಪ್ರತಿ ವರ್ಷವೂ ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆರೆಯುವ ಮುನ್ನ ದೇವಾಲಯದ ಮುಂಬಾಗಿಲ ಎದುರಿಗೆ ತಳವಾರ ಮನೆತನದವರು ಬಾಳೆ ಕಂದು ನೆಟ್ಟು, ಭಕ್ತಿಯಿಂದ ಭಜಿಸಿ, ಪಂಜಿನ ಆರತಿ ಎತ್ತಿ ಬಾಳೆ ಕಂದು ಕತ್ತರಿಸುತ್ತಾರೆ.
ಹಾಸನಾಂಬೆ ರಾಜ್ಯದ ಮೂಲೆ ಮೂಲೆಯಲ್ಲಿ ಭಕ್ತರನ್ನು ಹೊಂದಿದ್ದು, ಜಿಲ್ಲೆಯಲ್ಲಿ ಕೊರೊನಾ ಹೆಚ್ಚಿರುವುದರಿಂದ ಸರಳ ಮಹೋತ್ಸವಕ್ಕೆ ಜಿಲ್ಲಾಡಳಿತ ನಿರ್ಧರಿಸಿದೆ. ನಗರದ 10 ಕಡೆ ಎಲ್‌ಇಡಿ ಪರದೆಗೆ ವ್ಯವಸ್ಥೆ ಮಾಡಿದ್ದು, ಅಲ್ಲಿಂದಲೇ ಭಕ್ತರು ದೇವಿಯ ದರ್ಶನ ಪಡೆಯಬಹುದು. ಮಧ್ಯಾಹ್ನ 1.30ರಿಂದ 2.30ರವರೆಗಿನ ನೈವೇದ್ಯ ಸಮಯ ಹೊರತುಪಡಿಸಿ ಉಳಿದ ವೇಳೆ ದೇವಿಯನ್ನು ಜನರು ಕಣ್ತುಂಬಿಕೊಳ್ಳಬಹುದು. ಗರ್ಭಗುಡಿ ಬಾಗಿಲು ತೆರೆಯುವ ಹಾಗೂ ಹಾಕುವ ದಿನದಂದು ವಿಶೇಷ ಆಹ್ವಾನಿತರಿಗೆ ದೇವಸ್ಥಾನಕ್ಕೆ ಬರಲು ಅವಕಾಶ ಕಲ್ಪಿಸಲಾಗಿದೆ.