ಹಾಸನ:"ದೇವೇಗೌಡರು ಅಗ್ರಗಣ್ಯ ನಾಯಕರು. ಅವರು ಏನು ಹೇಳುತ್ತಾರೋ ಅದಕ್ಕೆ ನಾನು ಬದ್ಧ. ಹಾಸನ ಜಿಲ್ಲೆಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡ್ತೀನಿ ಅಂದ್ರೂ ಓಕೆ ಅಂತೀನಿ" ಎಂದು ಹೆಚ್.ಡಿ.ರೇವಣ್ಣ ಹೇಳಿದರು.
ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಕಣಕ್ಕಿಳಿಯುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಈಗಾಗಲೇ ದೇವೇಗೌಡರ ಬಳಿ ಮಾತನಾಡಿದ್ದೇನೆ. ಅದು ನಮ್ಮಿಬ್ಬರಿಗೆ ಮಾತ್ರ ಗೊತ್ತು. ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷ ಗೆಲ್ಲಬೇಕು ಅಷ್ಟೇ" ಎಂದರು.
ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕ ವಿಚಾರಕ್ಕೆ ಪ್ರತಿಕ್ರಿಯಿಸಿ, "ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಬಾಂಧವ್ಯ ಬೇರೆ. ಜೆಡಿಎಸ್ ಪಕ್ಷ, ದೇವೇಗೌಡರು, ಕುಮಾರಣ್ಣ ಇರುವಾಗ ನಾನೇಕೆ ಕಾಂಗ್ರೆಸ್ಗೆ ಹೋಗಲಿ. ಹಾಸನ ಟಿಕೆಟ್ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ. ನಾನು, ಕುಮಾರಣ್ಣ ಮೊದಲೇ ಮಾತನಾಡಿಕೊಂಡಿದ್ದೇವೆ. ಅದನ್ನು ದೇವೇಗೌಡರು ಸ್ಪಷ್ಟಪಡಿಸುತ್ತಾರೆ. ದೇವೇಗೌಡರ ಮಾತೇ ಅಂತಿಮ" ಎಂದು ಉತ್ತರಿಸಿದರು.
ಹಾಸನದಲ್ಲಿ ಶಕುನಿಗಳು ತಲೆಕೆಡಿಸುತ್ತಿದ್ದಾರೆ ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, "ಶಕುನಿಗಳ ಮಾತಿಗೆ ನಾನು ತಲೆಕೆಡಿಸಿಕೊಳ್ಳುವಂತಹ ವ್ಯಕ್ತಿಯಲ್ಲ. ನನ್ನ, ಕುಮಾರಣ್ಣನ ಮಧ್ಯೆ ಹೊಡೆದಾಡಿಸಲು ಸಾಧ್ಯವಿಲ್ಲ. ಬೆಳಗಾಗುವುದರೊಳಗೆ ನಾವು ಒಂದಾಗುತ್ತೇವೆ" ಎಂದು ಹೇಳಿದರು.