ಕರ್ನಾಟಕ

karnataka

ETV Bharat / state

ದೂರು ಸ್ವೀಕರಿಸದ ಹಿನ್ನೆಲೆ: ನಾಲ್ಕು ಮಂದಿ ಪೊಲೀಸ್​ ಪೇದೆಗಳ ಅಮಾನತು

ದರೋಡೆಗೆ ಒಳಗಾದ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಮುಂದಾದಾಗ ದೂರು ಸ್ವೀಕರಿಸಲು ಹಿಂದೇಟು ಹಾಕಿದ ನಾಲ್ವರು ಪೊಲೀಸ್​ ಪೇದೆಗಳನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಆದೇಶ ಹೊರಡಿಸಿದ್ದಾರೆ.

ನಾಲ್ಕು ಮಂದಿ ಪೊಲೀಸ್​ ಪೇದೆಗಳು ಅಮಾನತು
Suspended

By

Published : Jan 28, 2021, 7:49 AM IST

ಹಾಸನ: ದರೋಡೆಗೆ ಒಳಗಾದ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಮುಂದಾದಾಗ ದೂರು ಸ್ವೀಕರಿಸಲು ಹಿಂದೇಟು ಹಾಕಿದ ನಾಲ್ವರು ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಹಾಸನ ನಗರ ಠಾಣೆಯ ಮಲ್ಲೇಶ್, ತೀರ್ಥ ಹಾಗೂ ಕೆ.ಆರ್.ಪುರಂ ಪೊಲೀಸ್​​ ಠಾಣೆಯ ಸಿಬ್ಬಂದಿ ಯಶವಂತ್, ಪ್ರವೀಣ್ ಎಂಬುವವರನ್ನು ಅಮಾನತು ಮಾಡಲಾಗಿದೆ. ಕೇರಳದಿಂದ ಕಾರ್ಯ ನಿಮಿತ್ತ ವಾರದ ಹಿಂದೆ ನಗರಕ್ಕೆ ಬಂದು ರೈಲ್ವೆ ನಿಲ್ದಾಣದ ಸಮೀಪ ರೈಲ್ವೆ ಹಳಿಯ ಮೇಲೆ ನಡೆದು ಹೋಗುತ್ತಿದ್ದ ಕೇರಳದ ಪೊಲೀಸ್ ಸಿಬ್ಬಂದಿಯನ್ನು ಬೆದರಿಸಿ ಹಣ ಹಾಗೂ ಆತನ ಬಳಿ ಇದ್ದ ಮೊಬೈಲ್ ಕಸಿದು ಪರಾರಿಯಾಗಿದ್ದ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ನಾಲ್ಕು ಕಾನ್ಸ್‌ಸ್ಟೇಬಲ್​ಗಳು ಅಮಾನತುಗೊಂಡಿದ್ದಾರೆ.

ದರೋಡೆ ಒಳಗಾದ ಕೇರಳದ ಪೊಲೀಸ್ ಪೇದೆ ದೂರು ನೀಡಲು ನಗರ ಠಾಣೆಗೆ ಹೋದಾಗ ಕೃತ್ಯ ನಡೆದ ಸ್ಥಳ ತಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ಸಬೂಬು ಹೇಳಿ ಬಡಾವಣೆ ಠಾಣೆಗೆ ಹೋಗುವಂತೆ ತಿಳಿಸಿ ತಾತ್ಸಾರ ಮಾಡಿದ್ದರು. ನಂತರ ಆತ ಬಡಾವಣೆ ಠಾಣೆಗೆ ಹೋದಾಗ ಅಲ್ಲಿದ್ದ ಪೇದೆಗಳಿಬ್ಬರು ಆತನ ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಇದರಿಂದ ತೊಂದರೆಗೆ ಒಳಗಾದ ಕೇರಳದ ಪೊಲೀಸ್ ಪೇದೆ ತಾನು ನಿರ್ವಹಿಸುತ್ತಿದ್ದ ಕರ್ತವ್ಯಕ್ಕೆ ಎರಡು ದಿನಗಳ ಕಾಲ ವಿಳಂಬವಾಗಿ ಹಿಂದಿರುಗಿ ಹಾಸನದಲ್ಲಿ ನಡೆದ ಕೃತ್ಯ ಹಾಗೂ ಪೊಲೀಸ್ ನಿರ್ಲಕ್ಷ್ಯದ ಬಗ್ಗೆ ಕೇರಳ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು.

ಓದಿ: ಸಿಂದಗಿ ಶಾಸಕ ಎಂ.ಸಿ.ಮನಗೂಳಿ ವಿಧಿವಶ

ಈ ದೂರು ಆಧರಿಸಿ ಕೇರಳದ ಪೊಲೀಸ್ ಮಹಾನಿರ್ದೇಶಕರು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರ ಗಮನಕ್ಕೆ ತಂದಿದ್ದರು. ಬಳಿಕ ಪ್ರವೀಣ್ ಸೂದ್ ಅವರು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡರ ಬಳಿ ಮಾಹಿತಿ ಕೇಳಿ ಕೆಳಹಂತದ ಪೊಲೀಸ್ ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದೇ ಕೆಲಸ ಹೇಗೆ ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಹಾಸನದ ಎಸ್ಪಿ ನಾಲ್ವರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಿದ್ದಾರೆ.

ABOUT THE AUTHOR

...view details