ಹಾಸನ: ಇದು ಎರಡು ಬಂದರುಗಳನ್ನು ಸಂಪರ್ಕಿಸುವ ರಸ್ತೆ. ರಸ್ತೆ ನಿರ್ಮಾಣದ ಕಾಮಗಾರಿ ಪ್ರಾರಂಭವಾಗಿ ದಶಕ ಕಳೆಯುತ್ತಾ ಬರುತ್ತಿದ್ದರು, ಪೂರ್ಣವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ರಸ್ತೆಯಲ್ಲಿ ಹೊರಟರೆ ಮೈಮೂಳೆ ಮುರಿದುಕೊಂಡು ಆಸ್ಪತ್ರೆಗೆ ಸೇರಬೇಕು ಇಲ್ಲ ಪ್ರಾಣವನ್ನೇ ಬಿಟ್ಟು ಮಸಣ ಸೇರಬೇಕು ಎಂಬಂತಾಗಿದೆ.
ಒಂದೆಡೆ ರಸ್ತೆ ತುಂಬಾ ಬಿದ್ದಿರುವ ಗುಂಡಿಗಳು. ಎಲ್ಲಿ ಗುಂಡಿಗೆ ಬಿದ್ದು ಬಿಡುತ್ತೇವೆಯೋ ಎಂದು ದೊಡ್ಡ ದೊಡ್ಡ ವಾಹನಗಳ ನಡುವೆ ಸಾಗುತ್ತಿರುವ ದ್ವಿಚಕ್ರ ವಾಹನ ಸವಾರರು. ಹದಗೆಟ್ಟ ರಸ್ತೆಯಲ್ಲಿ ಸಾಗಿ ಕೆಟ್ಟು ನಿಂತಿರುವ ವಾಹನಗಳು. ವಾಹನಗಳ ಸಂಚಾರದಿಂದ ಧೂಳಿನ ನಡುವೆಯೂ ಸಂಚರಿಸುತ್ತಿರುವ ಪಾದಚಾರಿಗಳು.. ಇವೆಲ್ಲಾ ದೃಶ್ಯಾವಳಿಗಳು ಕಂಡು ಬಂದದ್ದು ರಾಷ್ಟ್ರೀಯ ಹೆದ್ದಾರಿ 75ರ ಹಾಸನ - ಸಕಲೇಶಪುರ ರಸ್ತೆಯಲ್ಲಿ. ಹೌದು ಇದು ರಾಜ್ಯ ರಸ್ತೆ ಅಲ್ಲ. ಬದಲಿಗೆ ಎರಡು ಬಂದರುಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ.
5 ವರ್ಷವಾದರೂ ಮುಗಿದಿಲ್ಲ ಕಾಮಗಾರಿ:
ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75ರ ಹಾಸನ - ಸಕಲೇಶಪುರ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಯೋಜನೆ ರೂಪಿಸಿದ್ರು. ಆದರೆ, ರಾಷ್ಟ್ರೀಯ ಹೆದ್ದಾರಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಈ ಹೆದ್ದಾರಿ 75ರ ಸ್ಥಿತಿ ಕಂಡರೆ ರಸ್ತೆಯೋ, ಹೊಂಡವೋ ಎಂಬ ಅನುಮಾನ ಕಾಡಿದೆ. ಜತೆಗೆ ಸ್ವಲ್ಪ ಎಚ್ಚರ ತಪ್ಪಿದರೂ, ಸಾವಿಗೆ ರಹದಾರಿ ನಿಶ್ಚಿತ.
ಹಾಸನದಿಂದ ಬಿಸಿ ರಸ್ತೆ (ಬಂಟ್ವಾಳ)ವರೆಗೆ ಚತುಷ್ಪಥ ರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾರ 600 ಕೋಟಿ ರೂ. ವೆಚ್ಚದ ಕಾಮಗಾರಿಗೆ 2017ರಲ್ಲಿ ಟೆಂಡರ್ ಕರೆದಿತ್ತು. ಬಳಿಕ ಐಸೋಲೆಕ್ಸ್ ಕಂಪನಿಗೆ ಗುತ್ತಿಗೆ ನೀಡಿ 2019ರ ಮಾ.31ಕ್ಕೆ ಕಾಮಗಾರಿ ಪೂರ್ಣಗೊಳಿಸಿ ಹೆದ್ದಾರಿ ಪ್ರಾಧಿಕಾರಕ್ಕೆ ಬಿಟ್ಟು ಕೊಡುವ ಷರತ್ತು ವಿಧಿಸಲಾಗಿತ್ತು.