ಸಕಲೇಶಪುರ (ಹಾಸನ): ಕಾಡಾನೆ ಹಾವಳಿ ತಪ್ಪಿಸಬೇಕು ಹಾಗೂ ಅರಣ್ಯ ಒತ್ತುವರಿ ತೆರವು ನಿಲ್ಲಿಸಬೇಕೆಂದು ಆಗ್ರಹಿಸಿ ಕರ್ನಾಟಕ ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ಪಟ್ಟಣದ ಉಪಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಹಾಸನ: ಕಾಡಾನೆ ಹಾವಳಿ ನಿವಾರಿಸಲು ಆಗ್ರಹಿಸಿ ಪ್ರತಿಭಟನೆ - Protest by Karnataka Farmers Union
ಕಾಡಾನೆಗಳ ಹಾವಳಿಯಿಂದ ಬೆಳೆ ನಷ್ಟವಾಗಿ ನಿರೀಕ್ಷಿತ ಬೆಳೆ ಬಾರದೆ ಬ್ಯಾಂಕಿನಲ್ಲಿ ಹಾಗೂ ಖಾಸಗಿಯಾಗಿ ಪಡೆದ ಸಾಲ ತೀರಿಸಲಾಗದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಕಾಡಾನೆ ಹಾವಳಿ ತಪ್ಪಿಸಿ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ಬೆಳೆಗಾರರು ಪಟ್ಟಣದ ಉಪಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಾಲೂಕಿನಲ್ಲಿ ಕಾಡಾನೆ ಹಾವಳಿ ವ್ಯಾಪಕವಾಗಿದ್ದು, ನಿರಂತರ ಬೆಳೆಹಾನಿಯಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕಾಡಾನೆಗಳ ಹಾವಳಿಯಿಂದ ಬೆಳೆ ನಷ್ಟವಾಗಿ ನಿರೀಕ್ಷಿತ ಬೆಳೆ ಬಾರದೆ ಬ್ಯಾಂಕಿನಲ್ಲಿ ಹಾಗೂ ಖಾಸಗಿಯಾಗಿ ಪಡೆದ ಸಾಲ ತೀರಿಸಲಾಗದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಕಾಡಾನೆಗಳನ್ನು ಸ್ಥಳಾಂತರಿಸಿ ಹಾಗೂ ಹಾನಿಗೊಂಡ ಬೆಳೆಗೆ ವೈಜ್ಞಾನಿಕ ಪರಿಹಾರ ನೀಡಿ ಎಂದು ಹಲವು ವರ್ಷಗಳಿಂದ ಹೋರಾಟ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಕಾಫಿತೋಟಗಳಲ್ಲಿ ಕಾಡಾನೆಗಳಿದ್ದರೂ ಪಟಾಕಿ ಸಿಡಿಸಿ ಬೇರೆಡೆ ಓಡಿಸುವಂತಿಲ್ಲ. ಹೀಗೆ ಮಾಡಿದರೆ ದೂರು ದಾಖಲಿಸುವ ಬೆದರಿಕೆಯನ್ನು ಅಧಿಕಾರಿಗಳು ಒಡ್ಡುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಪ್ರತಿವರ್ಷ ಪಟಾಕಿ ಖರ್ಚು ಎಂದು ಕೋಟಿಗೂ ಹೆಚ್ಚಿನ ಲೆಕ್ಕ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಡಾನೆ ಸಂಖ್ಯೆ ಹೆಚ್ಚಿದಂತೆ ಜನವಸತಿ ಪ್ರದೇಶಗಳಿಗೂ ಲಗ್ಗೆ ಇಡುತ್ತಿದ್ದು, ಮನೆಯಿಂದ ಹೊರಬರಬೇಕಾದರೆ ಹೆದರುವ ಪರಿಸ್ಥತಿ ಇದೆ. ಈ ವೇಳೆ ವಿಡಿಯೋ ಕಾಲ್ ಮೂಲಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಕೊರೊನಾ ಹಿನ್ನೆಲೆಯಲ್ಲಿ ಬೆಳೆಗಾರರು ಪ್ರತಿಭಟನೆ ಕೈ ಬಿಡಬೇಕು. ಮುಂದಿನ ಒಂದು ತಿಂಗಳಿನಲ್ಲಿ ಅಧಿಕಾರಿಗಳು ಹಾಗೂ ಬೆಳೆಗಾರರ ಸಭೆ ಆಯೋಜಿಸಿ ಒತ್ತುವರಿ ಹಾಗೂ ಕಾಡಾನೆ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.