ಹಾಸನ: ಸೆಪ್ಟೆಂಬರ್ 5 ರಂದು ನಡೆಯುವ ಶಿಕ್ಷಕರ ದಿನಾಚರಣೆಯನ್ನು ಸರ್ಕಾರದ ಆದೇಶದಂತೆ ಸರಳವಾಗಿ ಆಚರಿಸಲು ಅಗತ್ಯ ಪೂರ್ವ ಸಿದ್ದತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ ಸೂಚಿಸಿದರು.
ಶಿಕ್ಷಕರ ದಿನಾಚರಣೆ ಸರಳವಾಗಿ ಆಚರಿಸಲು ಸಿದ್ಧತೆ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಶಿಕ್ಷಕರ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಈ ಬಾರಿ ಶಿಕ್ಷಕರ ದಿನಾಚರಣೆ ನಗರದ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ನಡೆಸಲು ತೀರ್ಮಾನಿಸಿದ್ದು, ಸ್ಥಳಾವಕಾಶ ಹಾಗೂ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಸರಿಯಾದ ರೀತಿಯಲ್ಲಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಸರಳವಾಗಿ ಶಿಕ್ಷಕರ ದಿನಾಚರಣೆ ಆಚರಿಸಬೇಕು ಹಾಗೂ ನಿವೃತ್ತ ಶಿಕ್ಷಕರಿಗೆ ಪ್ರತಿ ವರ್ಷ ನೀಡುವಂತೆ ಈ ಬಾರಿಯೂ, ಅವರಿಗೆ ಸಂಬಂಧಿಸಿದ ತಾಲ್ಲೂಕುಗಳಲ್ಲಿಯೇ ಗೌರವ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಮಾಡಬೇಕು ಎಂದು ಹೇಳಿದರು.
ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಒಟ್ಟು 80 ಜನ ನಿವೃತ್ತ ಶಿಕ್ಷಕರಿದ್ದು, ಅವರೊಂದಿಗೆ ಉತ್ತಮ ಶಿಕ್ಷಕರೆಂದು ಪ್ರತಿ ತಾಲ್ಲೂಕಿನಿಂದ ಮೂರು ಜನ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡುವುದರ ಜೊತೆಗೆ ತಾಲ್ಲೂಕಿಗೆ ಒಬ್ಬರಂತೆ ಖಾಸಗಿ ಶಾಲೆಯ ಶಿಕ್ಷಕರನ್ನು ಗುರುತಿಸಿ ಅವರಿಗೂ ಪ್ರಶಸ್ತಿ ಹಾಗೂ ಸನ್ಮಾನ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಮಕ್ಕಳ ಜ್ಞಾನವನ್ನು ವೃದ್ಧಿಪಡಿಸುವಲ್ಲಿ ಶಿಕ್ಷಕರ ಪಾತ್ರ ಹೆಚ್ಚಾಗಿದೆ. ಅಂಕಗಳಿಕೆಗಾಗಿ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವ ಬದಲು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ದೇಶಕ್ಕೆ ಉತ್ತಮ ಪ್ರಜೆಯನ್ನಾಗಿ ಮಾಡುವಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಹೇಳಿದರು.