ಕರ್ನಾಟಕ

karnataka

ETV Bharat / state

ರೌಡಿಶೀಟರ್ ಕೊಲೆ ಪ್ರಕರಣ ಬೇಧಿಸಿದ ಹಾಸನ ಪೊಲೀಸರು! - ಹಾಸನ ಕೊಲೆ

ಜನವರಿ 19ರಂದು ರಾತ್ರಿ ನಡೆದಿದ್ದ ರೌಡಿಶೀಟರ್ ಆನಂದ್ ಕೊಲೆ ಪ್ರಕರಣ ಸಂಬಂಧ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ.

arrest
arrest

By

Published : Jan 23, 2021, 8:21 PM IST

ಹಾಸನ:ರೌಡಿಶೀಟರ್ ಆನಂದ್ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಜನವರಿ 19ರ ರಾತ್ರಿ ನಡೆದಿದ್ದ ರೌಡಿಶೀಟರ್ ಆನಂದ್ ಕೊಲೆ ಪ್ರಕರಣ ಸಂಬಂಧ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಕೊಲೆಗೆ ಕಾರಣ ಪತ್ತೆ ಹಚ್ಚಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಡಿ. ಕಾಳೇನಹಳ್ಳಿಯ ಕಾರು ಚಾಲಕ ಪುನೀತ್ (23), ಕೆ.ಎಂ. ಕಾರ್ತಿಕ್ (27) ವಿಜಯ್ ಕೆ. ಎನ್. (26) ಮತ್ತು ಚನ್ನರಾಯಪಟ್ಟಣ ರೈಲ್ವೆ ಸ್ಟೇಷನ್ ರಸ್ತೆಯ ರಾಮೇಶ್ವರ ಬಡಾವಣೆಯ ಗಗನ್ ಜಿ.ಕೆ. ಆಲಿಯಾಸ್ ಗೌತಮ್ (25) ಬಂಧಿತ ಆರೋಪಿಗಳು.

ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

ಯುವತಿಗೆ ಅಶ್ಲೀಲ ಮೆಸೇಜ್ ಮಾಡಿದ್ದೇ ಕೊಲೆಗೆ ಕಾರಣ:

ಸುಮಾರು ಒಂದೂವರೆ ತಿಂಗಳ ಹಿಂದೆ ಡಿ. ಕಾಳೇನಹಳ್ಳಿ ಪುನೀತ್ ಮತ್ತು ಮತ್ತೊಬ್ಬ ರೌಡಿಶೀಟರ್ ಗಜನಿ ನಡುವೆ ಗಲಾಟೆ ನಡೆದಿತ್ತು. ಗಜನಿ ಎಂಬಾತ ಪುನೀತ್ ಕಡೆಯ ಸಂಬಂಧಿಕರ ಯುವತಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದನಂತೆ. ಈ ಸಂಬಂಧ ಪುನೀತ್ ಮತ್ತು ಗಜಿನಿ ನಡುವೆ ವೈಮನಸ್ಸು ಉಂಟಾಗಿದ್ದು, ಗಲಾಟೆ ಕೂಡ ನಡೆದಿತ್ತು ಎನ್ನಲಾಗಿದೆ.

ಜೈಲಿನಿಂದ ಬಂದು ತಂದೆ-ತಾಯಿಗೆ ಬೆದರಿಕೆ:

ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆನಂದ ಮತ್ತು ಗಜನಿ ಸ್ನೇಹಿತರಾಗಿದ್ದು, ಐದಾರು ತಿಂಗಳ ಹಿಂದೆ ಬಾಗೂರು ಸಮೀಪದ ಗೋವಿನಕೆರೆಯ ಪ್ರಮೋದ್ ಕೊಲೆ ಪ್ರಕರಣದಲ್ಲಿ ಕೊಲೆಯಾದ ಆನಂದ ಜೈಲಿಗೆ ಹೋಗಿದ್ದ. ಜೈಲಿನಿಂದ ಬೇಲ್ ಮೂಲಕ ಹೊರ ಬಂದಿದ್ದ ಆನಂದ್, ತನ್ನ ಸ್ನೇಹಿತ ಗಜನಿಯ ವಿರುದ್ಧ ಗಲಾಟೆ ಮಾಡಿದ್ದ ಪುನೀತ್ ಮನೆಗೆ ನುಗ್ಗಿ ಆತನ ತಂದೆ ತಾಯಿಗೆ ಬೆದರಿಸಿ ನಿನ್ನ ಮಗನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡುತ್ತೇನೆ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈಯ್ದು, ಬಿಯರ್ ಬಾಟಲ್ ಒಡೆದು, ಕೊಲೆ ಬೆದರಿಕೆ ಹಾಕಿ ಹೋಗಿದ್ದ.

ಕಿರುಕುಳ ತಾಳಲಾರದೆ ಕೊಲೆ:

ನಮ್ಮ ತಂದೆ ತಾಯಿಗೆ ಕೊಲೆ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ದಾನೆ ಎಂಬ ಕಾರಣಕ್ಕೆ ಕುದಿಯುತ್ತಿದ್ದ ಪುನೀತ್, ಆನಂದನ ಕೊಲೆಗೆ ಸ್ಕೆಚ್ ಹಾಕಿದ್ದ. ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ನೆಪದಲ್ಲಿ ಆನಂದ್​ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕೇವಲ ಎರಡು ದಿನದ ಅಂತರದಲ್ಲಿ ಆರೋಪಿಗಳನ್ನು ಹೆಡೆಮುರಿಕಟ್ಟಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ABOUT THE AUTHOR

...view details